ನ.16: 72ನೇ ಅಖಿಲ ಭಾರತ ಸಹಕಾರ ಸಪ್ತಾಹ, ಮಂಗಳೂರಿನಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ- ಡಾ.ಎಂ.ಎನ್‌. ರಾಜೇಂದ್ರ ಕುಮಾರ್

ಮಂಗಳೂರು: “ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ” ಧ್ಯೇಯದೊಂದಿಗೆ ನವೆಂಬರ್ 16ರಂದು ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಲಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾಹಿತಿ ನೀಡಿದರು.

ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, “ಸಹಕಾರ ತತ್ವ ಮತ್ತು ಆಚರಣೆಯಲ್ಲಿ ಅಪಾರ ವಿಶ್ವಾಸವನ್ನು ಇರಿಸಿಕೊಂಡಿದ್ದ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂರವರು ಸಹಕಾರ ತತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಬಹುದೆಂಬ ಆಶಯವನ್ನು ಇರಿಸಿಕೊಂಡು ಹಲವಾರು ಯೋಜನೆಗಳನ್ನು ರೂಪಿಸಿದರು. ಇದು ಸಹಕಾರ ಚಳುವಳಿಯ ಬೆಳವಣಿಗೆಗೆ ಸಹಕಾರಿಯಾಯಿತು. ಇದರ ಫಲವಾಗಿ ರಾಷ್ಟ್ರದ ಸಹಕಾರ ಚಳುವಳಿಗೆ 121 ವರ್ಷಗಳ ಭವ್ಯ ಇತಿಹಾಸವಿದೆ. ವಿಶ್ವದಲ್ಲಿ ಅತ್ಯುತ್ತಮ ಸಹಕಾರ ಚಳುವಳಿಯನ್ನು ನಮ್ಮ ರಾಷ್ಟ್ರ ಹೊಂದಿರುತ್ತದೆ. ಸಮಾಜದ ಎಲ್ಲಾ ವರ್ಗದ ಆರ್ಥಿಕ ಬೆಳವಣಿಗೆಗೆ ಸಹಕಾರಿ ಕ್ಷೇತ್ರವೇ ಭದ್ರ ಬುನಾದಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ನವೆಂಬರ್ 14ರಿಂದ 20 ರವರೆಗೆ ರಾಷ್ಟ್ರದಾದ್ಯಂತ “ಅಖಿಲ ಭಾರತ ಸಹಕಾರ ಸಪ್ತಾಹ” ನಡೆಯುತ್ತದೆ. ಪಂಡಿತ್ ನೆಹರೂರವರ ಜನ್ಮದಿನವಾದ ನವೆಂಬರ್ 14ರಂದು ಸಪ್ತಾಹದ ಉದ್ಘಾಟನೆ ನಡೆಸಲಾಗುತ್ತದೆ” ಎಂದು ಹೇಳಿದರು.

“ಸಪ್ತಾಹದ ಅವಧಿಯಲ್ಲಿ ಸಹಕಾರ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಸಿ ಭವಿಷ್ಯದ ಸಹಕಾರಿ ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ಚಿಂತನೆ ನಡೆಸುವುದೇ ಸಹಕಾರಿ ಸಪ್ತಾಹದ ಮುಖ್ಯ ಉದ್ದೇಶವಾಗಿರುತ್ತದೆ. 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ಎಂಬ ಧೈಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯಮಟ್ಟದ ಏಳು ದಿನದ ಕಾರ್ಯಕ್ರಮಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ನಮ್ಮ ಉಭಯ ಜಿಲ್ಲೆಗಳಲ್ಲೂ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ“ ಎಂದು ಹೇಳಿದರು.

ನವೆಂಬರ್ 16ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ:
ನವೆಂಬರ್ 16ರಂದು “ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ” ಎಂಬ ವಿಷಯದೊಂದಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಯಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ.. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ., ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ, ವಿವಿಧ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಈ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ನುಡಿದರು.

“ಸಹಕಾರ ಮಾಣಿಕ್ಯ ಪ್ರಶಸ್ತಿ”:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸುವ ಉದ್ದೇಶದಿಂದ 2024ನೇ ಸಾಲಿನಿಂದ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಸಮಾರಂಭದಲ್ಲಿ “ಸಹಕಾರ ಮಾಣಿಕ್ಯ ಪ್ರಶಸ್ತಿ”ಯನ್ನು ನಿರ್ಧರಿಸಲಾಗಿದ್ದು. ಈ ಬಾರಿಯೂ 2025ರಲ್ಲಿ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಿ ಆಯ್ಕೆಗೊಂಡ ಸಹಕಾರಿ ಸಂಘಗಳಿಗೆ “ಸಹಕಾರ ಮಾಣಿಕ್ಯ ಪ್ರಶಸ್ತಿ”ಯ ಜೊತೆಗೆ 5 ಗ್ರಾಂ ಚಿನ್ನದ ಪದಕ, ರೂ.10,000/- ನಗದು ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಾಗುವುದು. ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ: ರಾಜ್ಯಮಟ್ಟದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು, ಮಹಿಳಾ ಸಹಕಾರಿ ಸಂಘಗಳು, ಮೀನುಗಾರಿಕಾ ಸಹಕಾರಿ ಸಂಘಗಳು, ಕ್ರೆಡಿಟ್ ಸೊಸೈಟಿಗಳು, ಸೌಹಾರ್ದ ಸಹಕಾರಿ. ಸಂಘಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು.

ಉತ್ತಮ ಸ್ವ-ಸಹಾಯ ಸಂಘಗಳಿಗೆ ಪುರಸ್ಕಾರ:
ಸಹಕಾರ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನವೋದಯ ಸ್ವ-ಸಹಾಯ ಗುಂಪುಗಳು ಬಡಜನರ ಆರ್ಥಿಕ ಶಕ್ತಿಯಾಗಿ ಕೆಲಸ ಮಾಡುತ್ತಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 35.000 ಕ್ಕೂ ಅಧಿಕ ನವೋದಯ ಸ್ವ-ಸಹಾಯ ಗುಂಪುಗಳಿದ್ದು, ಸಹಕಾರ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ಅತ್ಯುತ್ತಮ ಸ್ವ-ಸಹಾಯ ಗುಂಪುಗಳನ್ನು ಪುರಸ್ಕರಿಸಲಾಗುವುದು.

ಗಣ್ಯರಿಂದ ಉದ್ಘಾಟನೆ:
ರಾಜ್ಯ ಮಟ್ಟದ ಸಹಕಾರ ಸಪ್ತಾಹ ಆಚರಣೆಯ ಸಮಾರಂಭವನ್ನು ಸ್ಪೀಕರ್ ಯು.ಟಿ. ಖಾದರ್ ಫರೀದ್ ಇವರು ಉದ್ಘಾಟಿಸಲಿರುವರು. “ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ”ವನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇವರು ಮಾಡಲಿರುವರು. “ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ”ವನ್ನು ಕರ್ನಾಟಕ ಸರಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಳರ್ ಇವರು ನೆರವೇರಿಸಲಿದ್ದಾರೆ. “ಉತ್ತಮ ಸ್ವ-ಸಹಾಯ ಸಂಘಗಳಿಗೆ ಪುರಸ್ಕಾರವನ್ನು ಮಾನ್ಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.. ಬೆಂಗಳೂರು ಇದರ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಇವರು ಮಾಡಲಿರುವರು. ವಸ್ತುಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ಮಾಜಿ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣರವರು ನೆರವೇರಿಸಲಿದ್ದಾರೆ. ಸಹಕಾರ ಸಪ್ತಾಹದ ಧ್ವಜಾರೋಹಣವನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೆರವೇರಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ .. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ರವರು ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಡಿ. ಕಾಮತ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ। ಭರತ್ ಶೆಟ್ಟಿ ವೈ., ಶಾಸಕರು ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳ ನಿ., ಮಂಗಳೂರು ಇದರ ಅಧ್ಯಕ್ಷಯಶ್‌ಪಾಲ್ ಸುವರ್ಣ, ಕರ್ನಾಟಕ ವಿಧಾನಪರಿಷತ್ ಸದಸ್ಯರುಗಳಾದ ಐವನ್ ಡಿ.ಸೋಜಾ ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿ ಭಾಗವಹಿಸಲಿರುವರು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

ನಬಾರ್ಡ್, ಬೆಂಗಳೂರು ಇದರ ಮುಖ್ಯ ಮಹಾಪ್ರಬಂಧಕರಾದ ಡಾ| ಸುರೇಂದ್ರ ಬಾಬು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಗ್ಡೆ ಇವರು ಗೌರವ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಎಸ್.ಬಿ. ಶೆಟ್ಟಣ್ಣನವರ್, ಸರ್ಕಾರದ ಕಾರ್ಯದರ್ಶಿಗಳು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ, ಶ್ರೀ ಟಿ.ಎಚ್.ಎಂ. ಕುಮಾರ್, ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ, ಶ್ರೀ ದರ್ಶನ್ ಎಚ್.ವಿ., ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಶ್ರೀ ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಆಯುಕ್ತರು, ಮಂಗಳೂರು ಇವರು ಭಾಗವಹಿಸಲಿರುವರು. ಅಲ್ಲದೆ ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ನಂದಿನಿ ಹೊಸ ಉತ್ಪನ್ನಗಳ ಬಿಡುಗಡೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.


ಈ ಎಲ್ಲಾ ಕಾರ್ಯಕ್ರಮಗಳಿಗೆ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮದ ಪ್ರತಿನಿಧಿಗಳ ಪಹಕಾರ ಅತೀ ಅಗತ್ಯ. ಈ ಮೊದಲು ಕೂಡಾ ನಮ್ಮೆಲ್ಲಾ ಕಾರ್ಯಕ್ರಮಗಳಿಗೂ ತಾವು ಹೆಚ್ಚಿನ ಪ್ರಚಾರವನ್ನು ನೀಡಿ, ಸಹಕಾರ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವಂತೆ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಎಂಎಫ್‌ ಅಧ್ಯಕ್ಷ ಐಕಳ ಬಾವ ದೇವಿಪ್ರಸಾದ್‌ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ನಿರ್ದೇಶಕರಾದ ಶಶಿಕುಮಾರ್‌ ಬೊಳ್ಯೊಟ್ಟು, ವಿನಯ್ ಕುಮಾರ್ ಸೂರಿಂಜೆ, ಸಿಇಓ ಗೋಪಾಲಕೃಷ್ಣ ಭಟ್‌, ನಿರ್ದೇಶಕರುಗಳು ಸೇರಿ ಹಲವರು ಉಪಸ್ಥಿತರಿದ್ದರು.

 

error: Content is protected !!