
ಮಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಅವೈಜ್ಞಾನಿಕ ಹಂಪ್ಸ್ ಗಳನ್ನು ಅಳವಡಿಸಲಾಗಿದ್ದು ವಾಹನ ಸವಾರರ ಅದರಲ್ಲೂ ದ್ವಿಚಕ್ರ ಸವಾರರ ಪ್ರಾಣ ತಿನ್ನುವ ಹಂಪ್ಸ್ ಗಳಾಗಿ ಬದಲಾಗಿದೆ. ಕೆಲವು ಹಂಪ್ಸ್ ಗಳು ಅತಿಯಾದ ಎತ್ತರ, ಅರೆಬರೆ ಕಿತ್ತುಹೋದ ಮತ್ತು ಗುಂಡಿಗಳಿಂದ ಆವೃತ್ತವಾಗಿದ್ದು ಈಗಾಗಲೇ ಬಹಳಷ್ಟು ಮಂದಿ ಈ ಹಂಪ್ಸ್ ಗಳಿಂದಾಗಿ ರಸ್ತೆಗೆ ಉರುಳಿಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಈ ಬಗ್ಗೆ ಕಾರ್ಪೊರೇಟರ್ ಗಳಿಗೆ ಹೇಳಿದರೆ ʻನಮಗೆ ಅಧಿಕಾರವಿಲ್ಲ, ಇನ್ನು ಚುನಾವಣೆ ಆದ ಮೇಲಷ್ಟೇ ಅದರ ಕೆಲಸ ಸಾಧ್ಯʼ ಎನ್ನುತ್ತಾರೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹೇಳೋಣವೆಂದರೆ ಅವರು ಫೋನ್ ಎತ್ತುವುದೇ ಇಲ್ಲ ಎನ್ನುವ ಆರೋಪ ಜನಸಾಮಾನ್ಯರದ್ದಾಗಿದೆ.

ಮಂಗಳೂರಿನ ಕದ್ರಿ ಕಂಬಳ ರಸ್ತೆ, ಕದ್ರಿ, ಬೆಂದೂರ್ ವೆಲ್, ವೆಲೆನ್ಸಿಯಾ, ಕಂಕನಾಡಿ-ಪಂಪ್ ವೆಲ್ ರಸ್ತೆ, ಕೊಟ್ಟಾರ ರಸ್ತೆ, ಉರ್ವಾಸ್ಟೋರ್, ಚಿಲಿಂಬಿ, ಕೊಟ್ಟಾರ ಚೌಕಿಯಲ್ಲಿ ಕಿತ್ತುಹೋದ ಹಂಪ್ಸ್ ಗಳಿಂದಾಗಿ ಅನೇಕ ಅಪಘಾತಗಳು ನಡೆಯುತ್ತಿವೆ. ಹಂಪ್ಸ್ ಮೇಲಿನ ಡಾಂಬರು ಕಿತ್ತುಹೋಗಿ ಜಲ್ಲಿಕಲ್ಲು ಮೇಲೆದ್ದಿದ್ದು ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ರಸ್ತೆ ಗುಂಡಿಗಳು, ಅವೈಜ್ಞಾನಿಕ ಹಂಪ್ಸ್ ಗಳಿಂದ ನಗರದಲ್ಲಿ ಏನೆಲ್ಲ ಅನಾಹುತ ಸೃಷ್ಟಿಯಾಗಿದೆ ಎಂಬುದು ಗೊತ್ತಿದ್ದರೂ ಜಿಲ್ಲಾಡಳಿತ, ಮನಪಾ ಅಧಿಕಾರಿಗಳು ಕಣ್ಣಿದ್ದೂ ಕುರುಡಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟವರು ರಸ್ತೆಯ ಕಿತ್ತುಹೋದ ಹಂಪ್ಸ್ ಗಳಿಗೆ ಮರುಜನ್ಮ ನೀಡಲು ಮುಂದಾಗಬೇಕಿದೆ.