ಮಂಗಳೂರು: ಹಿಂದೂ ಮುಖಂಡ ಶರಣ್‌ಪಂಪ್‌ವೆಲ್ ಅವರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿರುವ ಕುರಿತಂತೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ ಆಧರಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ತಾನು ಪೋಸ್ಟನ್ನು ಡಿಲೀಟ್ ಮಾಡಿದ್ದು, ಎಫ್‌ಐಆರ್ ಆಗಿರುವುದು ತಿಳಿದು ಸ್ಟೇಷನ್‌ಗೆ ಬಂದಿದ್ದಾಗಿ ಶರಣ್ ಪಂಪ್‌ವೆಲ್ ಹೇಳಿದ್ದು, ಸೋಮವಾರ ತನಿಖೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಪ್ರತ್ಯೇಕವಾಗಿ, ಅವರು ನೀಡಿದ ಬಾಂಡ್ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಕಮೀಷನರ್ ಹೇಳಿಕೆ ನೀಡಿದ್ದಾರೆ.




ಆರ್‌ಎಸ್ಎಸ್(RSS) ಮುಖಂಡರೊಬ್ಬರ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರನ್ನು ಇಂದು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಪಂಪ್‌ವೆಲ್‌ಗೆ ಯಾವುದೇ ನೋಟೀಸ್ ನೀಡದೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದು, ಪೊಲೀಸ್ ಸ್ಟೇಷನ್ ಮುಂದೆ ಜಮಾಯಿಸಿದ್ದರು. ಆದರೆ ಪೊಲೀಸರು ಅವರನ್ನು ಒಳಗಡೆ ಹೋಗಲು ಬಿಟ್ಟಿರಲಿಲ್ಲ.
ಮಾಹಿತಿ ಪಡೆದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕದ್ರಿ ಠಾಣೆಗೆ ಆಗಮಿಸಿದ್ದರು. ಕದ್ರಿ ಪೊಲೀಸರು ಶರಣ್ ಪಂಪ್‌ವೆಲ್ ವಶಕ್ಕೆ ಪಡೆದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಕಾದು ಕಾದು ಸುಸ್ತಾಗಿದ್ದ ಕಾಮತ್ ಇನ್ಸ್ಪೆಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡು, ಯಾವುದೇ ನೋಟೀಸ್ ನೀಡದೆ ವಶಕ್ಕೆ ಪಡೆದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲಿಂದ ಅವರು ನೇರವಾಗಿ ಕಮೀಷನರ್ ಕಚೇರಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬ ವಿಡಿಯೋ ಹಾಕಿದ್ದನ್ನು ಶೇರ್ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಶರಣ್ ಪಂಪ್‌ವೆಲ್‌ರನ್ನು ಸ್ಟೇಷನ್‌ನಲ್ಲಿ ಬಂದು ಕೂರಿಸಿದ್ದಾರೆ. ಯಾವ ಎಫ್‌ಐಆರ್ ಹಾಕಿದ್ದಾರೆ, ಯಾವ ಸೆಕ್ಷನ್ ಹಾಕಿದ್ದಾರೆ ಎಂದು ಯಾವುದನ್ನೂ ತಿಳಿಸದೆ ಪೊಲೀಸ್ ಇಲಾಖೆ ಕಾಂಗ್ರೆಸ್ ಆಡಳಿತದ ಕೈಗೊಂಬೆಯಾಗಿ ಕೆಲಸ ಮಾಡ್ತಾ ಇದೆ. ಪೊಲೀಸರು ಮೊದಲು ನೋಟೀಸ್ ಕೊಡಬೇಕಿತ್ತು. ಆರೆಸ್ಸೆಸ್ ಮುಖಂಡರು, ಹಿಂದೂ ಮುಖಂಡರಿಗೆ ಉಳಿಗಾಲ ಇಲ್ಲದ ರೀತಿ ಕಾಂಗ್ರೆಸ್ ಮಾಡ್ತಾ ಇದೆ. ಕಾಂಗ್ರೆಸ್‌ನವರು ಹಿಟ್ಲರ್ ನಂತೆ ಆಡಳಿತ ನಡೆಸ್ತಾ ಇದ್ದಾರೆ. ಫೇಸ್‌ಬುಕ್‌ನಲ್ಲಿ ಸಾವಿರಾರು ಮಂದಿ ಬರೆಯುತ್ತಾರೆ. ನಮ್ಮ ಬಗ್ಗೆಯೂ ಬರೆಯುತ್ತಾರೆ. ಆದರೆ ಶರಣ್ ಪಂಪ್‌ವೆಲ್ ಯಾವುದನ್ನೂ ಬರೆದಿಲ್ಲ, ಆದರೆ ಶೇರ್ ಮಾಡ್ತಾರೆ ಎಂಬ ಕಾರಣಕ್ಕೆ ಕ್ರಮ ತೆಗೆದುಕೊಂಡಿದ್ದಾರೆ. ಶರಣ್‌ಗೆ ಮೊದಲೇ ನೊಟೀಸ್ ಕೊಡದೆ ಸ್ಟೇಷನ್‌ನಲ್ಲಿ ಬಂದು ಕೂರಿಸಿರುವುದನ್ನು ನಾವು ಖಂಡಿಸ್ತೇವೆ. ಇದರ ವಿರುದ್ಧ ಕಾನೂನು ರೀತಿ ಹೋರಾಟ ಮಾಡ್ತೇವೆ. ಪೊಲೀಸರು ಕಾಂಗ್ರೆಸ್‌ನ ಕೈಗೊಂಬೆ ಆಗಿದ್ದಾರೆ ಎಂದು ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.