ಕಾಸರಗೋಡು: ಕುಂಬ್ಳೆ ಬಳಿಯ ಅನಂತಪುರಂ ಕೈಗಾರಿಕಾ ಎಸ್ಟೇಟ್‌ನಲ್ಲಿರುವ ಡೆಕೋರ್ ಪ್ಯಾನಲ್ ಪ್ಲೈವುಡ್ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದಲ್ಲಿ ಒಬ್ಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ಇನ್ಬಾಸೇಕರ್ ಕೆ. ತಿಳಿಸಿದ್ದಾರೆ.
ಸ್ಫೋಟದ ತೀವ್ರತೆ ಅಷ್ಟು ಭೀಕರವಾಗಿತ್ತು ಎಂದರೆ, ಒಂದು ಕಿಲೋಮೀಟರ್ ದೂರದಲ್ಲಿದ್ದ ಮನೆಗಳ ಹಿತ್ತಲಿಗೂ ಯಂತ್ರದ ಭಾಗಗಳು ಹಾರಿವೆ. ಹತ್ತಿರದ ಮನೆಗಳು ಮತ್ತು ಇತರ ಕಾರ್ಖಾನೆಗಳ ಕಿಟಕಿಗಳು ಒಡೆದುಹೋಗಿದ್ದು, ಶಬ್ದದ ಅಬ್ಬರದಿಂದ ಕುಂಬಳ ಮತ್ತು ಬದಿಯಡುಕ್ಕ ಪಂಚಾಯತ್ ವ್ಯಾಪ್ತಿಯ ಮಾನ್ಯ, ನೀರ್ಚಲ್, ಸುರಂಬಯಲ್, ಸೀತಾಂಗೋಲಿ, ನಾಯ್ಕಪ್, ಪೆರೋಲ್ ಮತ್ತು ಕಣ್ಣೂರು ಪ್ರದೇಶಗಳಲ್ಲಿ ಭೂಕಂಪದ ಅನುಭವ ಉಂಟಾಯಿತು.

ಮೃತ ಕಾರ್ಮಿಕನನ್ನು ಅಸ್ಸಾಂ ಮೂಲದ ನಸೀರುಲ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಗಾಗಿ ಗಾಯಾಳುಗಳನ್ನು ಉಪ್ಪಳದ ಡಾಕ್ಟರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಆರು ಮಂದಿಯನ್ನು ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸುಮಾರು 300 ಕಾರ್ಮಿಕರನ್ನು ಉದ್ಯೋಗ ನೀಡಿರುವ ಈ ಘಟಕವು 24 ಗಂಟೆಗಳ ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಜೆ 6.45ರ ಪಾಳಿ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಕೆ. ಸಜಿತ್ ತಿಳಿಸಿದ್ದಾರೆ. ಸ್ಫೋಟದ ವೇಳೆಗೆ ಸುಮಾರು 20 ಮಂದಿ ಕಾರ್ಮಿಕರು ಕರ್ತವ್ಯದಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.

ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣ್ಣೂರು ವಾರ್ಡ್‌ನಲ್ಲಿರುವ ಈ ಕೈಗಾರಿಕಾ ಪ್ರದೇಶ ಪ್ರಸಿದ್ಧ ಅನಂತಪುರ ಸರೋವರ ದೇವಾಲಯದಿಂದ ಕೇವಲ 500 ಮೀಟರ್ ದೂರದಲ್ಲಿ ಇದೆ. “ಸಂಜೆ ಸುಮಾರು 7.10ಕ್ಕೆ ಸ್ಫೋಟದ ಭೀಕರ ಶಬ್ದ ಕೇಳಿಸಿತು. 300 ಮೀಟರ್ ವ್ಯಾಪ್ತಿಯೊಳಗಿನ ಮನೆಗಳ ಬಾಗಿಲು, ಕಿಟಕಿಗಳು ಹಾನಿಗೊಂಡುವು. ಶಬ್ದವು ಒಂದು ಕಿಲೋಮೀಟರ್ ದೂರದವರೆಗೂ ಕೇಳಿಬಂತು,” ಎಂದು ವಾರ್ಡ್ ಸದಸ್ಯ ಜನಾರ್ದನ ಪೂಜಾರಿ ಕೆ. ವಿವರಿಸಿದರು.

ಪ್ಲೈವುಡ್ ಕಾರ್ಖಾನೆಗಳಲ್ಲಿ ಬಳಸುವ ಬಾಯ್ಲರ್‌ಗಳು ಮರದ ಹಾಳೆಗಳನ್ನು ಒಣಗಿಸಲು ಹಾಗೂ ಒತ್ತಲು ಹೆಚ್ಚಿನ ಒತ್ತಡದ ಉಗಿ ಉತ್ಪಾದಿಸುತ್ತವೆ. ಸ್ಫೋಟದ ನಿಖರ ಕಾರಣ ತಿಳಿಯಬೇಕಾಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರೆದಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಘಟನೆಯ ತನಿಖೆಗಾಗಿ ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ಇಲಾಖೆ ಎರ್ನಾಕುಲಂನ ರಾಸಾಯನಿಕ ತುರ್ತು ಪ್ರತಿಕ್ರಿಯೆ ಕೇಂದ್ರ ತಂಡವನ್ನು ನಿಯೋಜಿಸಿದೆ. “ವಿವರವಾದ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಜಿಲ್ಲಾಧಿಕಾರಿ ಇನ್ಬಾಸೇಕರ್ ಹೇಳಿದರು.
ಕಾರ್ಖಾನೆ ಎರ್ನಾಕುಲಂ ಮೂಲದ ಉದ್ಯಮಿಗಳಿಗೆ ಸೇರಿದದ್ದು ಎಂದು ಮೂಲಗಳು ತಿಳಿಸಿವೆ. ಸ್ಫೋಟದ ಪ್ರಾಥಮಿಕ ಕಾರಣ ಬಾಯ್ಲರ್‌ನ ಅತಿಯಾದ ಬಿಸಿ ಅಥವಾ ಒತ್ತಡ ಹೆಚ್ಚಾದ ಪರಿಣಾಮವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

