ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಆರೋಪದಡಿ ದೇವರ ಜೀವನಹಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನೀಲ್ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಸಿಂಗ್ ಆದೇಶಿಸಿದ್ದಾರೆ.

ಆರ್.ಟಿ.ನಗರ ನಿವಾಸಿ 36 ವರ್ಷದ ಮಹಿಳೆ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ಈ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು. ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.ಈ ಬೆನ್ನಲ್ಲೇ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇನ್ ಸ್ಪೆಕ್ಟರ್ ಸುನೀಲ್ ಮದುವೆಯಾಗುವುದಾಗಿ ನಂಬಿಸಿ ಕಳೆದೊಂದು ವರ್ಷದಲ್ಲಿ ತನ್ನನ್ನು 3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ, ಪ್ರತಿ ಬಾರಿ ಫೋನ್ ಮಾಡಿದಾಗಲೂ ವಿಡಿಯೋ ಕಾಲ್ ಮಾಡಿ ಬೆತ್ತಲೆಯಾಗುವಂತೆ ಒತ್ತಾಯಿಸಿದ್ದಾರೆ. ಈ ವಿಚಾರ ತಿಳಿದ ಅದೇ ಠಾಣೆಯ ಎಎಸ್‌ಐ ಪ್ರಕಾಶ್, ಪಿಐ ಸುನೀಲ್ ಜತೆ ಮಲಗುತ್ತಿಯಾ? ನನ್ನೊಂದಿಗೆ ಯಾಕೆ ಮಲಗುವುದಿಲ್ಲ ಎಂದು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸಂತ್ರಸ್ತೆ ಆರೋಪಿಸಿ ಗೋವಿಂದಪುರ ಠಾಣೆಯಲ್ಲಿ ದೂರು ನೀಡಿದ್ದರು.