ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ರಶ್ಮಿಕಾ ಮಂದಣ್ಣ ಕೊನೆಗೂ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ಇಷ್ಟರವರೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟುಕೊಂಡು ಮಾತಾಡುತ್ತಿದ್ದ ರಶ್ಮಿಕಾ ಇದೀಗ ತಾನಾಗಿಯೇ ಒಪ್ಪಿಕೊಂಡಿರುವುದರಿಂದ ಅಭಿಮಾನಿಗಳು ʻಶುಭಸ್ಯ ಶೀಘ್ರಂʼ ಎಂದು ಹಾರೈಸಿದ್ದಾರೆ.

ಗುರು ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಚಿತ್ರ ಸಾವಿರ ಕೋಟಿ ಗಳಿಕೆಯ ಬೆನ್ನಲ್ಲೇ ಶಿಷ್ಯೆ ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾ ‘ಥಾಮಾ’ ಸೂಪರ್ ಹಿಟ್ ಆಗಿ ಚಿತ್ರ ನೂರು ಕೋಟಿ ರೂಪಾಯಿ ಕ್ಲಬ್ ಸೇರುವುದರಲ್ಲಿದೆ. ರಶ್ಮಿಕಾ ಮಂದಣ್ಣ ತೆರಳಿದಲ್ಲೆಲ್ಲ ಅವರಿಗೆ ಮಾಧ್ಯಮದವರಿಂದ, ಅಭಿಮಾನಿಗಳಿಂದ ನಿಶ್ಚಿತಾರ್ಥ ಪ್ರಶ್ನೆಗಳು ಎದುರಾಗುತ್ತಿವೆ. ಇದಕ್ಕೆ ರಶ್ಮಿಕಾ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ, ಈ ಬಾರಿ ರಶ್ಮಿಕಾ ಈ ವಿಚಾರಕ್ಕೆ ಸ್ಪಷ್ಟನೆ ಕೊಡುವ ಕೆಲಸ ಮಾಡಿದರು.

ರಶ್ಮಿಕಾ ಮಂದಣ್ಣ ನಟನೆಯ‘ದಿ ಗರ್ಲ್ಫ್ರೆಂಡ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ರಶ್ಮಿಕಾಗೆ ಅಭಿಮಾನಿಗಳಿಂದಲೇ ಈ ಬಗ್ಗೆ ಪ್ರಶ್ನೆಗಳು ಎದುರಾದವರು. ‘ನೀವು ಹಾಗೂ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದೀರಂತೆ ಹೌದಾ’ ಎಂದು ಪ್ರಶ್ನೆ ಮಾಡಲಾಯಿತು.

ಆದರೆ, ಈ ವಿಚಾರವನ್ನು ರಶ್ಮಿಕಾ ಅಲ್ಲಗಳೆದಿಲ್ಲ. ಬದಲಿಗೆ, ‘ಸಮಯ ಬಂದಾಗ ಹೇಳುತ್ತೇನೆ’ ಎಂದಿದ್ದಾರೆ.

ಸಾಮಾನ್ಯವಾಗಿ ವದಂತಿಗಳು ಎಂದಾಗ ಸೆಲೆಬ್ರಿಟಿಗಳು ಕಡ್ಡಿ ಮುರಿದಂತೆ ಮಾತನಾಡಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ನಾಚುತ್ತಲೇ ‘ಸಮಯ ಬಂದಾಗ ಹೇಳ್ತೀನಿ’ ಎಂದಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ವಿಚಾರವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

