ಮಂಗಳೂರು: ಇತ್ತೀಚೆಗೆ ಸುರತ್ಕಲ್ ಕಾನ ಎಂಬಲ್ಲಿ ಬಾರ್ ಮುಂಭಾಗ ನಡೆದಿದ್ದ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಗುರುರಾಜ್ ಆಚಾರ್ಯ(29)ನ ಮೇಲೆ ಪೊಲೀಸ್ ಓರ್ವರಿಗೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಪಕ್ ಬಾರಿನಲ್ಲಿ ಮದ್ಯ ಕುಡಿಯುತ್ತಿದ್ದ ಚೊಕ್ಕಬೆಟ್ಟು ನಿಝಾಮ್ ಮತ್ತು ಕೃಷ್ಣಾಪುರ ಹಸನ್ ಮುರ್ಷಿದ್ ಹಾಗೂ ಗುರುರಾಜ್ ತಂಡ ನಡುವೆ ಮಾತಿನ ಚಕಮಕಿ ನಡೆದು ಬಾರ್ ಮುಂಭಾಗ ಚೂರಿಯಿಂದ ಇರಿಯಲಾಗಿತ್ತು. ಸುರತ್ಕಲ್ ಕಟ್ಲ ನಿವಾಸಿಗಳಾದ ಸುಶಾಂತ್ ಯಾನೆ ಕಡವಿ, ಕೆ.ವಿ. ಅಲೆಕ್ಸ್, ಸುರತ್ಕಲ್ ಇಂದಿರಾ ಕಟ್ಟೆ ನಿವಾಸಿ ನಿತಿನ್ ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನಕಟ್ಟೆ ನಿವಾಸಿ ಅರುಣ್ ಶೆಟ್ಟಿ ಎಂಬವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು.
ಆದರೆ ತಲೆ ಮರೆಸಿಕೊಂಡಿದ್ದ ಗುರುರಾಜ್ ಆಚಾರ್ಯನ ಪತ್ತೆಗೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆತ ಕುಳಾಯಿಗುಡ್ಡೆ ಪ್ರಗತಿ ನಗರದ ಬಳಿ ಇರುವ ಬಗ್ಗೆ ಮಾಹಿತಿ ಆದರಿಸಿ ಸುರತ್ಕಲ್ ಠಾಣೆಯ ಪಿಎಸ್ಐ ಸುದೀಪ್ ಎಂ.ವಿ. ಹಾಗೂ ತಂಡದವರು ದಾಳಿ ನಡೆಸಿದ್ದರು. ಈ ಗುರುರಾಜ್ ಪ್ರಗತಿ ನಗರದ ಬಳಿ ಮಣ್ಣು ರಸ್ತೆಯಲ್ಲಿ ಮರವೊಂದರ ಕೆಳಗೆ ಅಡಗಿ ಕುಳಿತಿದ್ದ ಎನ್ನಲಾಗಿದೆ. ತನನ್ನು ಹಿಡಿಯಲು ಹತ್ತಿರ ಹೋದಾಗ ಆತ ಸ್ವಲ್ಪ ದೂರ ಓಡಿದ್ದ. ಪೊಲೀಸ್ ವಿನಾಯಕ ಅವರು ಓಡಿಹೋಗಿ ಆತನನ್ನು ಹಿಡಿದುಕೊಳ್ಳಲು ಮುಂದಾದಾಗ ಅಲ್ಲೇ ಬಿದ್ದಿದ್ದ ಒಂದು ಮರದ ದೊಣ್ಣೆ ಹಿಡಿದುಕೊಂಡಿದ್ದಾನೆ ಎನ್ನಲಾಗಿದೆ.
ನಾವು ಪೊಲೀಸರು ನಿನ್ನನ್ನು ದಸ್ತಗಿರಿ ಮಾಡಲು ಬಂದಿದ್ದೇವೆ ಎಂದು ಹೇಳಿ ಐಡಿ ಕಾರ್ಡ್ ಅನ್ನು ತೋರಿಸಿದರೂ ಕೇಳದ ಗುರುರಾಜ್ ಪೊಲೀಸ್ ವಿನಾಯಕರ ಭುಜಕ್ಕೆ ದೊಣ್ಣೆಯಿಂದ ಹೊಡೆದು ಕಾಲಿನಿಂದ ಒದ್ದು ಕೆಳಗೆ ಬೀಳಿಸಿ ಅಲ್ಲಿಂದ ಓಡಿ ಹೋಗಿದ್ದಾನೆ. ಅನಂತರ ಪಿಎಸ್ಐ ಮತ್ತು ಉಳಿದ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ ಎಂದು ಮಾಹಿತಿ ಲಭಿಸಿದೆ. ಗುರುರಾಜ್ ಮೇಲೆ ಪೊಲೀಸರಿಗೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದಡಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

