ಮಂಗಳೂರು: ಸಿಟಿ ಬಸ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದ ಘಟನೆ ಇಂದು ಬೆಳಗ್ಗೆ ನಂತೂರು ಸಮೀಪ ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ ಎಂಬ ಮಾಹಿತಿ ಲಭಿಸಿದೆ. ಆದರೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.






ವಾಮಂಜೂರು ಕಡೆಯಿಂದ ಬರುತ್ತಿದ್ದ ಸಾಯೀಷ ಹೆಸರಿನ 3 ನಂಬರಿನ ಸಿಟಿ ಬಸ್ ನಂತೂರು ಸಿಗ್ನಲ್ ದಾಟಿ ಮಲ್ಲಿಕಟ್ಟೆ ಕಡೆಗೆ ವೇಗವಾಗಿ ಬರುತ್ತಿತ್ತು. ಬಸ್ ಮುಂಭಾಗ ಸ್ಕೂಲ್ ಬಸ್ ಸಾಗುತ್ತಿದ್ದು, ಹಿಂಭಾಗ ಮತ್ತೊಂದು ಲೋಕಲ್ ಬಸ್ ಸಾಗುತ್ತಿತ್ತು ಎನ್ನಲಾಗಿದೆ. ಇದೇ ವೇಳೆ ಬಸ್‌ನ ಸ್ಟೇರಿಂಗ್ ಲಾಕ್‌ನ ಎಂಡ್ ಕಟ್ ಆಗಿ, ಟೈರ್ ನಿಯಂತ್ರಣ ಕಳೆದುಕೊಂಡು ಚಾಲಕನ ಕೈಯಿಂದ ಗುರಿತಪ್ಪಿದ ಬಸ್ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಬೀದಿ ದೀಪದ ಕಂಬವೊಂದು ಉರುಳಿ ಬಿದ್ದಿತು. ಏನಾಗುತ್ತದೆ ಅನ್ನುವಷ್ಟರಲ್ಲಿ ಘಟನೆ ನಡೆದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಇತರ ವಾಹನ ಸವಾರರು ತನ್ನ ವಾಹನವನ್ನು ನಿಲ್ಲಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಇಳಿಸಲು ಸಹಾಯ ಮಾಡಿದರು.
ರಸ್ತೆಯ ವಿರುದ್ಧ ಭಾಗದಲ್ಲೂ ಸಾಕಷ್ಟು ವಾಹನಗಳು ಸಾಗುತ್ತಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ. ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ಟ್ರಾಫಿಕ್ ನಿಯಂತ್ರಿಸಿದ್ದಾರೆ. ಬಸ್ಸನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

