ಮಂಗಳೂರು: ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಇದೀಗ ಅಶ್ಲೀಲ ವಿಡಿಯೋ ರವಾನಿಸುತ್ತಿದ್ದ ಯುವತಿಯ ಆರೋಪದ ಹಿನ್ನೆಲೆಯಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಾವೂರಿನ ಆಕಾಶಭವನದ ಕಾಪಿಗುಡ್ಡ, ನಿವಾಸಿ ನಿಖಿಲ್ ರಾಜ್(27) ಪ್ರಕರಣದ ಆರೋಪಿಯಾಗಿದ್ದಾನೆ.
ಏನಿದು ಪ್ರಕರಣ?
ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅ.18 ರಂದು ಯುವತಿಯೋರ್ವಳ ದೂರಿನ ಆಧಾರದಲ್ಲಿ ಅ.ಕ್ರ 146/2025 ಕಲಂ 79, 190 ಬಿ.ಎನ್.ಎಸ್, 66(ಎ), 67 ಐಟಿ ಆಕ್ಟ್ ಮತ್ತು 3(1)(w)(i)(ii) ಎಸ್.ಸಿ/ಎಸ್.ಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರಿನ ಪ್ರಕಾರ, ಕಾರ್ಕಳ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಎಂಬಾತ ದೂರುದಾರ ಯುವತಿಯನ್ನು ಬೆದರಿಸಿ ಮಾಡಿರುವ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ. ಅಲ್ಲದೆ ಅಭಿಷೇಕ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನೇಣು ಹಾಕಿರುವ ಫೋಟೋಗಳನ್ನು ದೂರುದಾರರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಭಿಷೇಕ್ ಆಚಾರ್ಯನ ತಮ್ಮ ಅಭಿಜಿತ್ ಆಚಾರ್ಯ ಹಾಗೂ ಇತರರು ಅಭಿಷೇಕ್ ಆಚಾರ್ಯ ಬರೆದಿದ್ದ ಡೆತ್ ನೋಟ್ ಹಾಗೂ ದೂರುದಾರರ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ದೃಶ್ಯ ಮಾದ್ಯಮಗಳಾದ ಯೂಟ್ಯೂಬ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಯಾಪ್ ಗ್ರೂಪ್ ಗಳಲ್ಲಿ ವೈರಲ್ ಮಾಡಿ ದೂರುದಾರ ಯುವತಿಯ ತೇಜೋವಧೆ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ದೂರುದಾರ ಯುವತಿ ಪರಿಶಿಷ್ಟ ಜಾತಿಗೆ ಸೇರಿದ್ದು, ಈ ರೀತಿ ಅಶ್ಲೀಲ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಜಾತಿ ನಿಂದನೆಯ ಚ್ಯುತಿ ಬರುವಂತೆ ಮಾಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಅಭಿಷೇಕ್ ಆಚಾರ್ಯ ಸಾವಿಗೀಡಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ರವಾನಿಸಿದ್ದ ಸಂದೇಶಕ್ಕೆ ಪೂರಕವಾಗಿ ಜಾತಿ ನಿಂದನೆಯ ಶಬ್ದವನ್ನು ಬಳಸಿದ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ, ಆಪಾದಿತ ನಿಖಿಲ್ ರಾಜ್ ಅ.21ರಂದು ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರು ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿ, ಆತನು ಉಪಯೋಗಿಸುತ್ತಿದ್ದ ಮೊಬೈಲ್ ಫೋನನ್ನು ತನಿಖೆಗೆ ವಶಕ್ಕೆ ಪಡೆದಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಕಮೀಷನರ್ ಪ್ರಕಟಣೆ ತಿಳಿಸಿದೆ.
ಈ ಪ್ರಕರಣವು ಎಸ್.ಸಿ/ಎಸ್.ಟಿ ಕಾಯ್ದೆಯಡಿಯಲ್ಲಿ ದಾಖಲಾಗಿ ತನಿಖೆ ನಡೆಯುತ್ತಿದ್ದು, ತನಿಖೆ ಮುಂದುವರೆದು ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ದ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿ, ಕೆಲವು ವ್ಯಕ್ತಿಗಳು ಅದೇ ಹುಡುಗಿಯ ಅಶ್ಲೀಲ ಫೋಟೋಗಳನ್ನು ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದು, ಅವರನ್ನೂ ಅವರನ್ನೂ ಬಂಧಿಸಲಾಗುವುದು ಎಂದು ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.