35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಸುಳ್ಯ: ಸುಳ್ಯ ಪೊಲೀಸರು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗಂಭೀರ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ತ್ರಿಶ್ಯೂರ್‌ ಜಿಲ್ಲೆಯ ನಾಟಿ ಮನೆ ನಿವಾಸಿ ಬಾಲನ್(73)‌ ಬಂಧಿತ ಆರೋಪಿ.

ಪೊಲೀಸರು ನೀಡಿದ ಮಾಹಿತಿಯಂತೆ, 1990ರಲ್ಲಿ ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ, ಆರೋಪಿಗಳು ಅಕ್ರಮವಾಗಿ ಕೂಡಿ, ಶಾಂತಪ್ಪ ಮತ್ತು ಸುಬ್ಬಯ್ಯ ಎಂಬವರಿಗೆ ತಲ್ವಾರ್‌ನಿಂದ ಕತ್ತರಿಸಿ ಗಂಭೀರ ರಕ್ತಗಾಯ ಮಾಡಿದ್ದರು. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 64/1990, ಕಲಂ 143, 147, 148, 324, 326, 506 ರೀ/ವ್ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಆ ಪ್ರಕರಣದ ಪ್ರಮುಖ ಆರೋಪಿ ಬಾಲನ್ (73), ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.

ದೀರ್ಘ ಅವಧಿಯ ಶೋಧಕಾರ್ಯ ಮತ್ತು ನಿಖರ ಸುಳಿವುಗಳ ಆಧಾರದಲ್ಲಿ, ಸುಳ್ಯ ಪೊಲೀಸರು ಆರೋಪಿಯನ್ನು ಕೇರಳ ರಾಜ್ಯದ ತ್ರಿಶ್ಯೂರ್‌ನಲ್ಲಿ ಪತ್ತೆಹಚ್ಚಿ ಬಂಧಿಸಿದರು.

ಬಂಧಿತನನ್ನು ಅ.13ರಂದು ಸುಳ್ಯ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಂತರ, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!