ಅಭಿಷೇಕ್ ಆಚಾರ್ಯ ಡೆತ್ ನೋಟಲ್ಲಿ ಹೆಸರಿಸಿದ್ದ ತೇಜು ಏನಾದ? ನಾಪತ್ತೆಯಾಗಿ 2 ವರ್ಷಗಳ ಬಳಿಕ ತನಿಖೆಗೆ ಪೋಷಕರ ಒತ್ತಾಯ!!

ಮಂಗಳೂರು: ಕಾರ್ಕಳ ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್‌ ಆಚಾರ್ಯ(23) ಡೆತ್‌ನೋಟ್‌ ಬರೆದಿಟ್ಟು ಬೆಳ್ಮಣ್‌ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆತ ಡೆತ್ ‌ನೋಟ್‌ನಲ್ಲಿ ಉಲ್ಲೇಖಿಸಿದ್ದ ತೇಜಕುಮಾರ್‌ ನಾಪತ್ತೆಯಾಗಿ ಎರಡು ವರ್ಷ ಕಳೆದಿರುವುದು ಬೆಳಕಿಗೆ ಬಂದಿದೆ. ತೇಜಕುಮಾರ್‌ ನಾಪತ್ತೆಯಾಗಿದ್ದಾಗಿ ಈ ಮುಂಚೆಯೇ ಮನೆಯವರು ಕಡಬ ಠಾಣೆಗೆ ನಾಪತ್ತೆ ದೂರು ನೀಡಿದ್ದು ಇದೀಗ ಅಭಿಷೇಕ್‌ ಆಚಾರ್ಯ ಡೆತ್‌ ನೋಟಲ್ಲಿ ತೇಜಕುಮಾರ್‌ ಹೆಸರಿರುವುದರಿಂದ ತೇಜಕುಮಾರ್ ‌ನನ್ನು ಪತ್ತೆಹಚ್ಚಲು ಕುಟುಂಬಿಕರು ಮಂಗಳೂರು ಪೊಲೀಸ್‌ ಕಮಿಷನರ್‌ ಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ತನ್ನ ಸಾವಿಗೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಕಳಸದ ನಿರೀಕ್ಷಾ, ಮಣೇಲ್‌ ನಿವಾಸಿ ಕುಲಶೇಖರದ ನಂದಿನಿ ಡೈರಿಯಲ್ಲಿ ಕೆಲಸ ಮಾಡುವ ರಾಕೇಶ್‌, ಕಂಕನಾಡಿಯ ರಾಹುಲ್ ಹಾಗೂ ಗುರುಪುರ ಕೈಕಂಬದ ತಸ್ಲಿಂ ಅವರೇ ಕಾರಣ ಎಂದು ಡೆತ್ ನೋಟಲ್ಲಿ ಬರೆಯಲಾಗಿತ್ತು. ಇದನ್ನು ಅಭಿಷೇಕ್ ಆಚಾರ್ಯ ಮನೆಮಂದಿ ಮಾಧ್ಯಮಗಳ ಮುಂದೆ ಹೇಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಅಲ್ಲದೆ ಮೊದಲ ಹಾಗೂ ಎರಡನೇ ಪುಟದಲ್ಲಿ ತೇಜಕುಮಾರ್‌ ನಾಪತ್ತೆಯಾಗಿರುವ ವಿಚಾರ ಪ್ರಸ್ತಾಪಿಸಿದ್ದ.

ಪತ್ರದಲ್ಲಿ ಏನಿತ್ತು?
ಅಲ್ಲದೆ ಅಭಿಷೇಕ್‌ ತನ್ನ ಡೆತ್ ‌ನೋಟಲ್ಲಿ ತನ್ನ ರೂಮೇಟ್‌ ತೇಜ ಕುಮಾರ್‌ ತಂದೆ ತಾಯಿಯ ಬಳಿ ಕ್ಷಮೆ ಯಾಚಿಸಿದ್ದ. ತಾವು ಬಿಕರ್ನಕಟ್ಟೆಯ ರೂಮಿಗೆ ಹೋಗಿರುವ ವಿಚಾರವನ್ನು ಅಭಿಷೇಕ್‌ ಪ್ರಸ್ತಾಪಿಸಿದ್ದಾನೆ. ನಿರೀಕ್ಷಾ ಹಿಡನ್‌ ಕ್ಯಾಮರಾದ ಮೂಲಕ ತೇಜು ಹಾಗೂ ಆತನ ಗೆಳತಿ ಇರುವ ವಿಡಿಯೋಗಳನ್ನು ತೆಗೆದಿದ್ದಳು. ಇದನ್ನು ತಂಡದ ತಸ್ಲೀಂ ಎಂಬಾತ ಹಣಕ್ಕಾಗಿ ಹೊರದೇಶದ ಸ್ನೇಹಿತರಿಗೆ ಕಳಿಸಿದ್ದು ಬಳಿಕ ನಿರೀಕ್ಷಾ ತೇಜು ಬಳಿ 5 ಲಕ್ಷ ಹಣ ಡಿಮ್ಯಾಂಡ್‌ ಮಾಡಿದ್ದಾಳೆ. ಆದರೆ ಆತನ ಮನೆ ಕೆಲಸ ನಡೆಯುತ್ತಿದ್ದ ಕಾರಣ ತನ್ನಲ್ಲಿ ಹಣ ಇಲ್ಲ ಎಂದು ಅಂಗಲಾಚಿದ್ದಾನೆ. ತನಗೆ ಏನೂ ಮಾಡಲು ಸಾಧ್ಯ ಆಗಲಿಲ್ಲ. ನಿರೀಕ್ಷಾ ವಿರುದ್ಧ ನಿಂತರೆ ಎಲ್ಲರಿಗೂ ವಿಷಯ ಗೊತ್ತಾಗುತ್ತದೆ. ನೀನು ಹಣ ಕೊಡು, ಇಲ್ಲವಾದರೆ ಮರ್ಯಾದೆ ಹೋಗುತ್ತದೆ ಎಂದು ಹೇಳಿದಾಗ ಆತ ಹಣ ಕೊಡಲು ಒಪ್ಪಿದ್ದನು. ಆದರೆ ಅಲ್ಲಿಂದ ಮೂರ್ನಾಲ್ಕು ದಿನಗಳ ಬಳಿಕ ತೇಜು ಕಾಣೆಯಾಗಿದ್ದು, ಆತನಿಗೆ ಏನಾಗಿದೆ ಎಂದು ಯಾರಿಗೂ ಗೊತ್ತಾಗಿಲ್ಲ ಎಂದು ಅಭಿಷೇಕ್‌ ಪತ್ರದಲ್ಲಿ ಹೇಳಿದ್ದ.

ತೇಜುಕುಮಾರ್‌ಗಾಗಿ ಕುಟುಂಬಿಕರು ಕಡಬ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದರು. ಆದರೆ ಆತನ ಸುಳಿವು ಇಂದಿಗೂ ಲಭಿಸದ ಕಾರಣ ತೇಜುಕುಮಾರ್‌ ಆತ್ಮಹತ್ಯೆ ಅಥವಾ ಕೊಲೆ ನಡೆದಿರುವ ಶಂಕೆಯಿದೆ. ಹೀಗಾಗಿ ಆತನನ್ನು ಪತ್ತೆಹಚ್ಚಲು ಕಮೀಷನರ್ ‌ಗೆ ದೂರು ನೀಡಲು ಮುಂದಾಗಿದ್ದಾಗಿ ಸೋದರ ನವೀನ್ ತಿಳಿಸಿದ್ದಾರೆ.

error: Content is protected !!