ಮಂಗಳೂರು: ಆರೆಸ್ಸೆಸ್ ಸ್ವಯಂ ಸೇವಕರು ದಂಡ ಹಿಡಿದು ಪಥಸಂಚಲ ನಡೆಸಿದಾಗ ಭಯ ಆಗುತ್ತದೆ ಎನ್ನುವ ಪ್ರಿಯಾಂಕ್ ಅವರೇ ಟಿಪ್ಪು ಜಯಂತಿ ಸಂದರ್ಭ ಕತ್ತಿ ಹಿಡಿದು ಮೆರವಣಿಗೆ ನಡೆಸಿದಾಗ ನಿಮಗೆ ಭಯ ಆಗಲಿಲ್ವಾ? ಆರೆಸ್ಸೆಸ್ ಪ್ರಪಂಚದ ನಂಬರ್ ವನ್ ಸಂಘಟನೆ. ಪ್ರಿಯಾಂಕ್ ಖರ್ಗೆ ಆರೆಸ್ಸ್ ಬಗ್ಗೆ ತಿಳಿಯದೆ ಅಜ್ಞಾನದಿಂದ ತುಂಬಿ ತುಳುಕುತ್ತಿರುವುದರಿಂದಲೇ ಆ ರೀತಿಯ ಪದಗಳನ್ನು ಬಳಕೆ ಮಾಡಿದ್ದಾರೆ. ಸಂಘಟನೆಯ ಬಗ್ಗೆ ಹೀಯಾಳಿಸಿದ ಪ್ರಿಯಾಂಕ್ ಖರ್ಗೆಯ ವಿರುದ್ಧ ಸರ್ಕಾರ ಕೂಡ್ಲೇ ಕ್ರಮ ತೆಗೆದುಕೊಳ್ಳಬೇಕು, ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು. ಎಂಎಲ್‌ಸಿ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಆರೆಸ್ಸೆಸ್ ಬಗ್ಗೆ ತಿಳಿದುಕೊಳ್ಳಲು ಪ್ರಿಯಾಂಕ್ ಖರ್ಗೆಯವರನ್ನೂ ಕರೆಯುತ್ತೇವೆ ಅವರ ಅಪ್ಪನನ್ನೂ ಕರೆಯುತ್ತೇವೆ ಎಂದು ಸವಾಲು ಹಾಕಿದರು. ಆರೆಸ್ಸೆಸ್ ಈ ದೇಶ ಮಾತ್ರವಲ್ಲ ಪ್ರಪಂಚದ ನಾನಾ ಕಡೆಗಳಲ್ಲಿ ತನ್ನ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಇದು ವ್ಯಕ್ತಿ ಹಾಗೂ ದೇಶದಲ್ಲಿ ಬದಲಾವಣೆ ತರುತ್ತದೆ. ಆರೆಸ್ಸೆಸ್ ಮಾಡದ ಸೇವಾ ಚಟುವಟಿಕೆಗಳಿಲ್ಲ. ದೇಶದಲ್ಲಿ ಬಸ್-ರೈಲು ದುರಂತ, ಪ್ರವಾಹ, ಬೆಂಕಿ, ಬರಗಾಲ ಹೀಗೆ ಏನೇ ಅನಾಹುತ ಸಂಭವಿಸಿದರೂ ಆರೆಸ್ಸೆಸ್‌ನ ಲಕ್ಷಾಂತರ ಮಂದಿ ಸ್ವಯಂಸೇವಕರು ನಿಸ್ವಾರ್ಥ ಭಾವದಿಂದ ಸೇವೆ ಮಾಡುತ್ತಾರೆ. ಇಂತಹಾ ಸಂಘಟನೆಯ ಬಗ್ಗೆ ಅಹಂಕಾರಿ ಖರ್ಗೆ ಅಜ್ಞಾನಿಯಂತೆ ಮಾತಾಡಿರುವುದು ಸರಿಯಲ್ಲ ಎಂದರು.
ಆರೆಸ್ಸೆಸ್ ದೇಶಕ್ಕೆ ಇಬ್ಬರು ಪ್ರಧಾನಿಗಳನ್ನು ಕೊಟ್ಟಿದ್ದೆ. ಒಬ್ಬರು ಅಟಲ್ ಬಿಹಾರಿ ವಾಜಪೇಯಿ, ಇನ್ನೊಬ್ಬರು ನರೇಂದ್ರ ಮೋದಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಾಜಪೇಯಿ ನೇತೃತ್ವದಲ್ಲಿ ವಿದೇಶಗಳಿಗೆ ನಿಯೋಗವನ್ನು ಕಳಿಸಿತ್ತು. ಆಗ ಕಾಂಗ್ರೆಸ್‌ನವರೇ ವಾಜಪೇಯಿಯವರನ್ನು ಮುಕ್ತಕಂಠದಿಂದ ಹೊಗಳಿದ್ದರು. ಬೇಕಿದ್ದರೆ ನಿಮ್ಮ ಅಪ್ಪ(ಮಲ್ಲಿಕಾರ್ಜನ ಖರ್ಗೆ)ನಲ್ಲಿ ಕೇಳಿ. ನಿಮಗೆ ಅಧಿಕಾರದ ಅಮಲು ನೆತ್ತಿಗೇರಿದೆ ಎಂದರು.
ನಿಮಗೆ ತಾಖತ್ ಇದ್ರೆ ಎಸ್‌ಡಿಪಿಐ ಮೇಲೆ ಕ್ರಮ ತೆಗೆದುಕೊಳ್ಳಿ. ಪಿಎಪ್ಐ ಬ್ಯಾನ್ ಮಾಡ್ರಿ. ಕುಕ್ಕರ್ ಬಾಂಬ್ ಸ್ಫೋಟಿಸುವವರನ್ನು ತನ್ನ ಬ್ರದರ್ ಅಂದಿದ್ದೀರಿ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಸಂದರ್ಭ ಅಖಂಡ ಶ್ರೀನಿವಾಸ್ ಮನೆಯನ್ನು ಸುಟ್ಟವರುಯ ಯಾರು? ಬಯೋತ್ಪಾದರಂತೆ ವರ್ತಿಸಿದವರ ಕೇಸ್ ವಾಪಸ್ ತೆಗೆದವರು ಯಾರು? ಶಿವಮೊಗ್ಗ, ಮಂಗಳೂರು, ಕೋಲಾರ, ಗುಲ್ಬರ್ಗ, ತೀರ್ಥಹಳ್ಳಿ ಗಲಭೆ ನಡೆಸಿದವರು ಯಾರು? ಆರೆಸ್ಸೆಸ್ ದಂಡ ಹಿಡಿದು ಪಥಸಂಚಲ ನಡೆಸಿದಾಗ ಭಯ ಆಗುತ್ತದೆ ಎನ್ನುವ ಪ್ರಿಯಾಂಕ್ ಅವರೇ ಟಿಪ್ಪು ಜಯಂತಿ ಸಂದರ್ಭ ಕತ್ತಿ ಹಿಡಿದು ಮೆರವಣಿಗೆ ನಡೆಸಿದಾಗ ನಿಮಗೆ ಭಯ ಆಗಲಿಲ್ವಾ? ಆರೆಸ್ಸೆಸ್ ಸ್ವಯಂಸೇವಕರು ತನ್ನ ರಕ್ಷಣೆಗಾಗಿ, ಸಮಾಜದ ರಕ್ಷಣೆಗಾಗಿ ದಂಡ ಹಿಡಿಯುತ್ತಾರೆ ಎನ್ನುವುದನ್ನು ಖರ್ಗೆ ನೆನಪಿಸಲಿ ಎಂದರು.
ರೈತರ, ವಿದ್ಯಾರ್ಥಿಗಳ ಕೇಸ್ ವಾಪಸ್ ತೆಗೆಯುವ ಬದಲು ಕಾಂಗ್ರೆಸ್ ಕುಕ್ಕರ್ ಬಾಂಬ್ ಸ್ಫೋಟಿಸಿದವರ, ಕತ್ತಿ ಹಿಡಿದು ದನಗಳನ್ನು ಹತ್ಯೆ ಮಾಡಿದವರ ಕೇಸ್ ವಾಪಸ್ ತೆಗೆದಿದೆ. ಜೈಲಿನಲ್ಲಿ ಉಗ್ರರಿಗೆ ಬಿರಿಯಾನಿ ತಿನ್ನಿಸಿದ್ದಾರೆ. ಪಾಕ್ ಪರ ಘೋಷಣೆ ಮಾಡಿದವರ ಮೇಲೆ ಇವರಿಗೆ ಕ್ರಮ ತೆಗೆದುಕೊಳ್ಳಲಿಗೆ ಆಗಲಿಲ್ಲ. 1962ರಲ್ಲಿ ಯುದ್ಧ ನಡೆದಾಗ ಆರೆಸ್ಸೆ ಸೇವೆ ಗಮನಿಸಿ ಅಂದಿನ ಪ್ರಧಾನಿ ನೆಹರೂ ಅವರೇ ಸ್ವಯಂಸೇವಕರನ್ನು ದೇಹಲಿಯಲ್ಲಿ ಸೋಲ್ಡರ್ ಪರೇಡ್‌ಗೆ ಕರೆಸಿಸಿತ್ತು. ಇಂದಿರಾ ಗಾಂಧಿ, ನೆಹರೂ ಆರೆಸ್ಸೆಸ್ ಬಗ್ಗೆ ಏನು ಹೇಳಿದ್ದರು ಎನ್ನುವುದನ್ನು ತನ್ನ ತಂದೆಯ ಬಳಿ ಕೇಳಿ ತಿಳಿದುಕೊಳ್ಳಲಿ. ಸ್ವತಃ ಗಾಂಧೀಜಿಯವರೇ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿ ಸಂಘದ ಚಟುವಟಿಕೆಗಳನ್ನು ಹೊಗಳಿದ್ದರು. ಅಂಬೇಡ್ಕರ್ ಅವರೂ ಆರೆಸ್ಸೆ ಬಗ್ಗೆ ಸಂಶೋಧನೆ ನಡೆಸಿ ಮೆಚ್ಚಿಕೊಂಡಿದ್ದರು ಎಂದು ರವಿಕುಮಾರ್ ನೆನಪಿಸಿದರು.
ಆರೆಸ್ಸೆಸ್ ನೂರು ವರ್ಷ ತುಂಬಿದ ಹಿನ್ನೆಲೆ ಇದರ ಬಗ್ಗೆ ಇಡೀ ಜಗತ್ತಿನ ಜನ ತಿಳಿದುಕೊಳ್ಳಲು ದೇಶ ವಿದೇಶಗಳಲ್ಲಿ ಪಥಸಂಚಲನ ನಡೆಸುತ್ತಿದೆ. ಪೊಲೀಸ್ ಅನುಮತಿ ತೆಗೆದುಕೊಂಡೇ ರೂಟ್ ಮಾರ್ಚ್ ನಡೆಯುತ್ತಿದೆ. ದೇಶ ಸೇವೆಗೆ ಯಾರ ಪರ್ಮಿಷನ್ ಬೇಕು? ಹಾಗೆಂದು ಕೇಳಲು ಪ್ರಿಯಾಂಕ ಯಾವೂರ ದೊಣ್ಣೆ ನಾಯಕ? ಆರೆಸ್ಸೆಸ್ ಬಗ್ಗೆ ವಿದೇಶಗಳ ಪ್ರಧಾನಿಗಳೂ ಮೆಚ್ಚಿಕೊಂಡಿದ್ದರು. ಪ್ರಿಯಾಂಕ್ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕೆಂದರು.
ಆರೆಸ್ಸೆಸ್ ವಿರೋಧಿಸಿ ನೂರಾರು ಮಂದಿ ಪುಸ್ತಕ ಬರೆದಿದ್ದಾರೆ. ಆದರೆ ಇದನ್ನು ಮೆಚ್ಚಿಕೊಂಡು ಸಾಕಷ್ಟು ಮಂದಿ ಪುಸ್ತಕ ಬರೆದಿದ್ದಾರೆ. ಎಸ್‌ಎಲ್ ಭೈರಪ್ಪರೂ ಆರೆಸ್ಸೆಸ್ ಹೊಗಳಿದ್ದಾರೆ. ಈ ರೀತಿಯ ಪುಸ್ತಕಗಳನ್ನು ನಾನೂ ತಂದು ಕೊಡುತ್ತೇನೆ. ನಮಗೆ ಎಲ್ಲರೂ ಮಿತ್ರರೇ… ಬೇಕಾದರೆ ಶಾಖೆಗೆ ಪ್ರಿಯಾಂಕ್ ಬರ್ಲಿ ಅವರ ಅಪ್ಪನು ಕೂಡಾ ಬರಲಿ. ವಿಧಾನ ಸೌಧದಲ್ಲೇ ಡಿಕೆಶಿ ನಮಸ್ತೇ ಸದಾ ವತ್ಸಲೇ ಅಂದಿದ್ದಾರೆ. ನಿಮ್ಮ ಕಾಂಗ್ರೆಸ್‌ನಲ್ಲಿಯೂ ಆರೆಸ್ಸೆಸ್‌ನವರಿದ್ದಾರೆ. ಬೇಕಾದ್ರೆ ನಾನೇ ಲಿಸ್ಟ್ ಕೊಡುತ್ತೇನೆ. ನಿಮ್ಮ ಸವಾಲುಗಳಿಗೆ ಉತ್ತರಿಸಲು ಒಬ್ಬ ಮುಖ್ಯ ಶಿಕ್ಷಕ್ ಸಾಕು. ಇಂತಹ ಮುಖ್ಯ ಶಿಕ್ಷಕ್‌ಗಳು ಸಾವಿರಾರು ಮಂದಿ ಇದ್ದಾರೆ ಎಂದರು.
ಆರೆಸ್ಸೆಸ್ ನೋಂದಾಯಿತ ಸಂಘಟನೆಯಾಗಿದೆ. ಅದು ತಿಳಿಯದೆ ಇಂದಿಗೂ ಅಜ್ಞಾನದಿಂದ ರಿಜಿಸ್ಟರ್ಡ್ ಆಗಿಲ್ಲ ಎನ್ನುತ್ತಾರೆ. ಕಾಂಗ್ರೆಸ್‌ನವರ ಮನೆಯವರೂ ಆರೆಸ್ಸೆಸ್‌ಗೆ ಗುರುಪೂಜೆಯ ಸಮಯ ಹಣ ಕೊಡುತ್ತಾರೆ ಎಂದರು. ಆರೆಸ್ಸೆಸ್ ಬಗ್ಗೆ ಎಷ್ಟು ಟೀಕೆ ಮಾಡಿದ್ರೂ ಹರಿಪ್ರಸಾದ್ ಅವರನ್ನು ಮಂತ್ರಿ ಮಾಡಲ್ಲ ಎಂದು ವ್ಯಂಗ್ಯವಾಡಿದರು.
ಪ್ರಿಯಾಂಕ್ ತಾಖತ್ ಇದ್ದರೆ ಆರೆಸ್ಸೆಸ್‌ಗೆ ನಿರ್ಬಂಧ ತಂದು ನೋಡಲಿ. ನೆಹರೂ, ಇಂದಿರಾ ಕೈಯಿಂದಲೂ ನಿಷೇಧಿಸಲಾಗಿಲ್ಲ. ಇನ್ನು ನಿಮ್ಮಿಂದ ಸಾಧ್ಯವೇ ಎಂದು ಸವಾಲು ಹಾಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ, ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಸಂಜೀವ್ ಮಠಂದೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ಶಾಂತಿಪ್ರಸಾದ್ ಹೆಗ್ಡೆ, ಪೂರ್ಣಿಮಾ, ದೇವಪ್ಪ ಬಂಟ್ವಾಳ, ಸಂಜಯ ಪ್ರಭು, ಸೀತಾರಾಮ್ ಬೆಳಾಲು, ದಯಾನಂದ ಶೆಟ್ಟಿ, ದಿನೇಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.