ಮಂಗಳೂರು: ರಂಗಭೂಮಿ ಹಾಗೂ ಕಲಾ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಯ ಹಿನ್ನೆಲೆಯಲ್ಲಿ ಕುಸೇಲ್ದರಸೆ ನವೀನ್ ಡಿ. ಪಡೀಲ್ ಅವರಿಗೆ ಈ ಬಾರಿಯ ʻರಂಗಚಾವಡಿ ಪ್ರಶಸ್ತಿʼ ಲಭಿಸಿದೆ.
ನವೆಂಬರ್ 9ರಂದು (ಭಾನುವಾರ) ಸಂಜೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಅದ್ದೂರಿಯಾಗಿ ನಡೆಯಲಿರುವ ರಂಗುರಂಗಿನ ರಂಗೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮವನ್ನು ರಂಗಚಾವಡಿ ಮಂಗಳೂರು ಹಾಗೂ ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ (ರಿ.), ಸುರತ್ಕಲ್ ಸಂಯುಕ್ತವಾಗಿ ಆಯೋಜಿಸಿದೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ʻಕಲಿ ವಲಿ ಕಾಮಿಡಿʼ ಎಂಬ ಭರ್ಜರಿ ಹಾಸ್ಯ ಕಾರ್ಯಕ್ರಮ, ಜೊತೆಗೆ ʻರಾಗ್ ರಂಗ್ʼ ಸಂಗೀತ ರಸಮಂಜರಿ ನಡೆಯಲಿದೆ. “ಬಾವ ಬಂದರೋ” ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಸೇರಿದಂತೆ ಅನೇಕ ಹಾಸ್ಯ ದಿಗ್ಗಜರು ಹಾಗೂ ಖ್ಯಾತ ಸಂಗೀತ ಕಲಾವಿದರು ಭಾಗವಹಿಸಿ ನಗೆ-ರಾಗದ ಖುಷಿ ನೀಡಲಿದ್ದಾರೆ.
ಗೀತ ಗಾಯನ, ಹಾಸ್ಯ ರಸಾಯಣ, ನಾನ್‌ಸ್ಟಾಪ್ ಕಾಮಿಡಿ—ಎಲ್ಲದರ ಸಂಯೋಜನೆಯಿಂದ ಕಾರ್ಯಕ್ರಮವು ನಗುವಿನ ಹಬ್ಬವಾಗಲಿದ್ದು, ಎಲ್ಲರಿಗೂ ಪ್ರವೇಶ ಉಚಿತ-ನಗು ಖಚಿತ ರಂಗಚಾವಡಿ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಹೇಳಿದ್ದಾರೆ.