ಚೆನ್ನೈ: ದಕ್ಷಿಣ ಭಾರತದ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಮತ್ತೆ ಮದುವೆ ಸುದ್ದಿಯಿಂದ ಟ್ರೆಂಡ್ ಆಗಿದ್ದರು. ಚಂಡೀಗಢ ಮೂಲದ ಉದ್ಯಮಿಯೊಂದಿಗೆ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಿದಿತ್ತು.
ಆದರೆ, ನಟಿ ತ್ರಿಶಾ ಸ್ವತಃ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. “ಜನ ನನಗಾಗಿ ನನ್ನ ಲೈಫ್ ಪ್ಲ್ಯಾನ್ ಮಾಡಿದಾಗ ನನಗೆ ತುಂಬಾ ಇಷ್ಟ. ಈಗ ಅವ್ರು ನನ್ನ ಹನಿಮೂನ್ ಸಹ ನಿಗದಿ ಮಾಡೋ ಸಮಯಕ್ಕೆ ಕಾಯ್ತಿದ್ದೀನಿ!” ಎಂದು ತ್ರಿಶಾ ಬರೆದಿದ್ದು, ಪೋಸ್ಟ್‌ನಲ್ಲಿ ಬೇಸರದ ಎಮೋಜಿಯನ್ನೂ ಸೇರಿಸಿದ್ದಾರೆ.
ತ್ರಿಶಾ ಮದುವೆ ಕುರಿತ ವದಂತಿಗಳು ಹೊಸದೇನಲ್ಲ. 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಕೆಲವೇ ತಿಂಗಳಲ್ಲಿ ಅದು ರದ್ದಾಯಿತು. ಅದಕ್ಕೂ ಮೊದಲು ನಟ ಸಿಂಬು ಹಾಗೂ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ಬಗ್ಗೆ ಸುದ್ದಿ ಹರಿದಿತ್ತು.
ಪ್ರಸ್ತುತ ತ್ರಿಶಾ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಮದುವೆ ಕುರಿತು ಕುಟುಂಬದ ಪರದಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವದಂತಿಗಳ ಮಧ್ಯೆಯೂ ತ್ರಿಶಾ ತನ್ನ ಹಾಸ್ಯಭರಿತ ಪ್ರತಿಕ್ರಿಯೆಯಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.