ಮುಂಬೈ : ಭಾರತದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ನತಾಶಾ ಸ್ಟ್ಯಾಂಕೋವಿಕ್ ಅವರಿಂದ ವಿಚ್ಛೇದನ ಪಡೆದ ಬಳಿಕ, ಪಾಂಡ್ಯ ಮತ್ತೆ ಪ್ರೀತಿಯಲ್ಲಿ ಮುಳುಗಿದ್ದಾರೆ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಈಗ ಅದಕ್ಕೆ ಅಧಿಕೃತ ದೃಢತೆ ಸಿಕ್ಕಿದೆ.
ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಹೊಸ ಗರ್ಲ್‌ಫ್ರೆಂಡ್ ಮಹೀಕಾ ಶರ್ಮಾ ಅವರೊಂದಿಗೆ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಟಿ20 ಏಷ್ಯಾಕಪ್ ನಂತರ ವಿಶ್ರಾಂತಿ ಪಡೆಯುತ್ತಿರುವ ಪಾಂಡ್ಯ, ಮಹೀಕಾ ಶರ್ಮಾ ಅವರೊಂದಿಗೆ ಬೀಚ್ ಎದುರು ಹಾಗೂ ನೈಟ್ ಔಟ್ ವೇಳೆ ತೆಗೆದ ಚಿತ್ರಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಮೊದಲ ಚಿತ್ರದಲ್ಲಿ ಪಾಂಡ್ಯ ಮಹೀಕಾ ಅವರ ಹೆಗಲ ಮೇಲೆ ಕೈ ಇಟ್ಟು ನಗುಮುಖದ ಪೋಟು ನೀಡಿದ್ದು, ಮತ್ತೊಂದು ಚಿತ್ರದಲ್ಲಿ ಇಬ್ಬರೂ ನೈಟ್ ಲೈಫನ್ನು ಆನಂದಿಸುತ್ತಿರುವುದು ಕಾಣಿಸುತ್ತದೆ.
ಮಹೀಕಾ ಅವರ ಹಾಟ್ ಲುಕ್ ಹಾಗೂ ಪಾಂಡ್ಯ ಅವರ ಸಿಂಪಲ್ ಸ್ಟೈಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಯಾರು ಈ ಮಹೀಕಾ ಶರ್ಮಾ?
ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಮಹೀಕಾ ಶರ್ಮಾ, ಫ್ಯಾಷನ್ ಉದ್ಯಮದಲ್ಲಿ ಹೆಸರು ಮಾಡಿರುವ ಮಾಡೆಲ್. ಅವರು “IFEA Model of the Year” ಮತ್ತು “Elle Model of the Season” ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮಹೀಕಾ ಇನ್‌ಸ್ಟಾಗ್ರಾಂನಲ್ಲಿ 1.47 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ನತಾಶಾ ಜೊತೆಗಿನ ಅಧ್ಯಾಯ ಮುಗಿದಿತ್ತು
ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಜುಲೈ (2024)ರಲ್ಲಿ ನಟಿ ನತಾಶಾ ಸ್ಟ್ಯಾಂಕೋವಿಕ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಇಬ್ಬರು ತಮ್ಮ ಮಗ ಅಗಸ್ತ್ಯನಿಗೆ ಸಹ-ಪೋಷಕರಾಗಿದ್ದಾರೆ.
ಆ ಬಳಿಕ, ಈ ವರ್ಷದ ಆರಂಭದಲ್ಲಿ ಹಾರ್ದಿಕ್ ನಟಿ ಇಶಾ ಗುಪ್ತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಆದರೆ, ಅದನ್ನು ಇಶಾ ಗುಪ್ತಾ ತಳ್ಳಿಹಾಕಿದ್ದರು.