ಕಲ್ಕೂರ ಪ್ರತಿಷ್ಠಾನದ ʻಕಾರಂತ ಪ್ರಶಸ್ತಿʼ ಈ ಬಾರಿ ಸಭಾಪತಿ ಬಸವರಾಜ ಹೊರಟ್ಟಿಗೆ: ಅ.14ರಂದು ಪ್ರಶಸ್ತಿ ಪ್ರದಾನ ಸಮಾರಂಭ- ಪ್ರದೀಪ್‌ ಕುಮಾರ್‌ ಕಲ್ಕೂರ

ಮಂಗಳೂರು: ಕಡಲತೀರದ ಭಾರ್ಗವ, ಖ್ಯಾತ ಸಾಹಿತಿ ಕೋಟ ಶ್ರೀನಿವಾಸ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನದಿಂದ ನೀಡಲಾಗುವ “ಕಾರಂತ ಪ್ರಶಸ್ತಿ – 2025” ಈ ಬಾರಿ ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಗೆ ಪ್ರದಾನಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 14, ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಜರಗಲಿದೆ ಎಂದರು.

ಬಸವರಾಜ್‌ ಹೊರಟ್ಟಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ನಿವಾಸಿಯಾಗಿದ್ದು, ಆರಂಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 976ರಲ್ಲಿ ಸ್ಥಾಪಿಸಿದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತ ಎಂಟು ಬಾರಿ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಏಕೈಕ ಕನ್ನಡಿಗ ಇವರು. 2004ರಲ್ಲಿ ಸಚಿವರಾಗಿ ವಿಜ್ಞಾನ, ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಖಾತೆಗಳನ್ನು ನಿರ್ವಹಿಸಿದ ಹೊರಟ್ಟಿಯವರು ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 43 ವರ್ಷಗಳಿಂದ ನಿರಂತರವಾಗಿ ವಿಧಾನ ಪರಿಷತ್ತಿನಲ್ಲಿ ಸೇವೆ ಸಲ್ಲಿಸಿರುವ ಇವರ ಸಾಧನೆ ‘ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲಾಗಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಚಿಂತಕ, ಶಿಕ್ಷಣ ತಜ್ಞ ಹಾಗೂ ಜನಪ್ರಿಯ ರಾಜಕಾರಣಿಯಾಗಿ ಹೊರಟ್ಟಿ ಗುರುತಿಸಿಕೊಂಡ ಹೊರಟ್ಟಿಯವರ ಅಪ್ರತಿಮ ಸೇವೆ, ಸಮರ್ಪಣೆ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಪರಿಗಣಿಸಿ ಈ ಬಾರಿಯ ‘ಕಾರಂತ ಪ್ರಶಸ್ತಿ–2025’ ಗೌರವ ನೀಡಲಾಗುತ್ತಿದೆ ಎಂದು ಪ್ರದೀಪ್ ಕುಮಾರ ಕಲ್ಕೂರ ನುಡಿದರು.

ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದು, ಖ್ಯಾತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ “ಕಾರಂತ ಸಂಸ್ಮರಣೆ” ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರಬಂಧ ಸ್ಪರ್ಧೆಯ ವಿಜೇತರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಬಹುಮಾನ ವಿತರಿಸಲಿದ್ದು, ಕಾರಂತರ ಚಿತ್ರರಚನಾ ಸ್ಪರ್ಧೆಯ ವಿಜೇತರಿಗೆ ಸಂತ ಅಲೋಶಿಯಸ್ ಪ್ರೌಢಶಾಲೆಯ ಪ್ರಾಂಶುಪಾಲ ಫಾ. ಜಾನ್ಸನ್ ಪಿಂಟೋ ಪ್ರಶಸ್ತಿ ನೀಡಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆವಹಿಸಲಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಪಾನಿ ಆಲ್ವಾರಿಸ್, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್., ಹಿರಿಯ ಸಾಹಿತಿ ಡಾ. ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯ ಸಮೂಹದ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಸಾಹಿತಿ ಡಾ. ಲೀಲಾ ಉಪಾಧ್ಯಾಯ, ಖ್ಯಾತ ಕೇಶ ವಿನ್ಯಾಸಗಾರ ಡಾ. ಶಿವರಾಮ ಭಂಡಾರಿ, ಹಿರಿಯ ಸಾಹಿತಿ ಶಾಂತರಾಜ ಐತಾಳ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಈ ಹಿಂದೆ ಈ ಪ್ರಶಸ್ತಿಯನ್ನು ಬಿ.ಎಂ. ಇದಿನಬ್ಬ, ಸದಾನಂದ ಸುವರ್ಣ, ಡಾ. ಅಮೃತ ಸೋಮೇಶ್ವರ, ಡಾ. ನಾ. ಸೋಮೇಶ್ವರ, ಡಾ. ಎಂ. ಪ್ರಭಾಕರ ಜೋಶಿ, ಪ್ರೊ. ಕೆ.ಎಸ್. ನಿಸಾರ್ ಅಹಮದ್, ಡಾ. ಲೀಲಾ ಉಪಾಧ್ಯಾಯ ಮೊದಲಾದವರು ಪಡೆದಿದ್ದರು ಎಂದು ಪ್ರದೀಪ್ ಕುಮಾರ ಕಲ್ಕೂರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಮ, ಪೂರ್ಣಿಮಾ, ಜಿಕೆ ಬಸವೇಶ್ವರ್‌, ಚೆನ್ನಬಸಪ್ಪ, ಅಬ್ದುಲ್‌ ರೆಹಮಾನ್‌ ಮತ್ತಿರರಿದ್ದರು.

error: Content is protected !!