ಧರ್ಮಸ್ಥಳ ಬುರುಡೆ ಪ್ರಕರಣ : ಪ್ರಣವ್‌ ಮೊಹಾಂತಿ ಬೆಳ್ತಂಗಡಿ ಭೇಟಿ, ಅಧಿಕಾರಿಗಳೊಂದಿಗೆ ಚರ್ಚೆ

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ಎಸ್‌ಐಟಿ ತನಿಖೆ ಭಾಗವಾಗಿ ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ ಅವರು ಬೆಳ್ತಂಗಡಿಗೆ ಆಗಮಿಸಿ ಎರಡು ದಿನಗಳ ಕಾಲ ಅಧಿಕಾರಿಗಳ ಜತೆಗೆ ಸುದೀರ್ಘ‌ ಸಭೆ ನಡೆಸಿ ಬೆಂಗಳೂರಿಗೆ ತೆರಳಿದ್ದಾರೆ.

ಅ. 9ರಂದು ಸಂಜೆ 6ರ ಬಳಿಕ ಬೆಳ್ತಂಗಡಿಗೆ ಆಗಮಿಸಿದ ಅವರು ರಾತ್ರಿ 11 ರ ವರೆಗೂ ಅಧಿಕಾರಿಗಳ ಜತೆಗೆ ಸಭೆಯನ್ನು ನಡೆಸಿ ಮಂಗಳೂರಿನಲ್ಲಿ ವಾಸ್ತವ್ಯವಿದ್ದು, ಶುಕ್ರವಾರ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ತನಿಖೆಯ ಸದ್ಯದ ಪ್ರಗತಿಯನ್ನು ಸರಕಾರಕ್ಕೆ ಒಪ್ಪಿಸಿ ಮುಂದಿನ ತನಿಖಾ ಕ್ರಮದ ಕುರಿತು ಮಾರ್ಗದರ್ಶನ ಪಡೆಯುವ ಸಾಧ್ಯತೆ ಇದೆ.

ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಕಚೇರಿಗೆ ಆಗಮಿಸಿ ಆಂತರಿಕ ಸಭೆಗಳನ್ನು ನಡೆಸಿದ್ದು, ಉಳಿದಂತೆ ವಿಚಾರಣೆ ಸಹಿತ ಹೆಚ್ಚಿನ ಪ್ರಗತಿ ನಡೆದಿಲ್ಲ. ಕೆಲವು ದಿನಗಳ ತನಿಖೆಯ ಪ್ರಗತಿ ಹಾಗೂ ವಿಚಾರಣೆಗಳ ಮಾಹಿತಿಯನ್ನು ಪಡೆದಿರುವ ಮೊಹಾಂತಿ, ತನಿಖೆಯ ಮುಂದಿನ ಪ್ರಗತಿಯ ಕುರಿತು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಷಡ್ಯಂತ್ರ ರೂಪಿಸಿದ ಪ್ರಭಾವಿಗಳ ವಿಚಾರಣೆ ಜತೆಗೆ ಕೆಲವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಜತೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸರಕಾರದ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

error: Content is protected !!