ತಿರುವನಂತಪುರಂ: ದೇವಭಕ್ತರ ನಂಬಿಕೆಯ ಕೇಂದ್ರವಾದ ಶಬರಿಮಲೆ ದೇವಾಲಯದ ಪವಿತ್ರ ಬಾಗಿಲುಗಳ ಚಿನ್ನ ನಾಪತ್ತೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. 2019ರಲ್ಲಿ “ಪುನರ್‌ನವೀಕರಣ” ಹೆಸರಿನಲ್ಲಿ ದೇವಸ್ಥಾನದಿಂದ ಹೊರಟ ಚಿನ್ನದ ಬಾಗಿಲ ಫಲಕಗಳು, ಒಂದು ತಿಂಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ವಿವಿಧ ಕಡೆಗಳಲ್ಲಿ ಸಂಚರಿಸಿ ಹಿಂದಿರುಗುವ ವೇಳೆಗೆ 4.5 ಕೆ.ಜಿ ಚಿನ್ನ ನಾಪತ್ತೆಯಾಗಿರುವುದು ಈಗ ಭಾರಿ ಸಂಚಲನ ಮೂಡಿಸಿದೆ.
ಕೋರ್ಟ್ ದಾಖಲೆಗಳ ಪ್ರಕಾರ, 2019ರ ಜುಲೈ 19ರಂದು ದೇವಾಲಯದ ಬಾಗಿಲಿನ ಚಿನ್ನದ ಫಲಕಗಳು ತೆರವುಗೊಳಿಸಿ ತೂಕಮಾಡಲಾಯಿತು — ಆಗ ತೂಕ 42.8 ಕೆ.ಜಿ ಆಗಿತ್ತು.
ಅದೆಂದಿನ ಬೆಳಗೇ ಫಲಕಗಳನ್ನು ಉನ್ನಿಕೃಷ್ಣನ್ ಪೊಟ್ಟಿ ಅವರ ವಶದಲ್ಲಿ ಚೆನ್ನೈನ ಸ್ಮಾರ್ಟ್ ಕ್ರಿಯೇಷನ್ಸ್ ಕಂಪನಿಗೆ “ಇಲೆಕ್ಟ್ರೋಪ್ಲೇಟಿಂಗ್” ಕೆಲಸಕ್ಕಾಗಿ ಕಳುಹಿಸಲಾಯಿತು. ಹಾಗೆಯೇ ನೇರವಾಗಿ ಕಳಿಸಿದ್ದರೆ ಚಿನ್ನ ನಾಪತ್ತೆಯಾಗುತ್ತಿರಲಿಲ್ಲವೋ ಏನೋ.. ಆದರೆ ಆದರೆ ಫಲಕಗಳು ನೇರವಾಗಿ ಚೆನ್ನೈ ತಲುಪದೆ 39 ದಿನಗಳ ಕಾಲ ದಕ್ಷಿಣ ಭಾರತ ಸುತ್ತಾಡಿ ಕೊನೆಗೆ ಆಗಸ್ಟ್ 29ರಂದು ತಲುಪಿದಾಗ ತೂಕ ಕೇವಲ 38.25 ಕೆ.ಜಿ ಮಾತ್ರ ಉಳಿದಿತ್ತು. ಅಂದರೆ 4.54 ಕೆ.ಜಿ ಚಿನ್ನ ನಾಪತ್ತೆ!
ಈ ಅವಧಿಯಲ್ಲಿ ಫಲಕಗಳು ಕೋಟಾಯಂನ ಖಾಸಗಿ ದೇವಸ್ಥಾನ, ಆಂಧ್ರದ ಕೆಲವು ದೇವಸ್ಥಾನಗಳು ಹಾಗೂ ಬೆಂಗಳೂರು ಶ್ರೀರಾಮಪುರಂ ಅಯ್ಯಪ್ಪ ದೇವಸ್ಥಾನಕ್ಕೆ ಕರೆದೊಯ್ಯಲ್ಪಟ್ಟಿದ್ದವು. ಆದರೆ ಫಲಕಗಳನ್ನು ಮಲಯಾಳಂ ನಟ ಪದ್ಮಶ್ರೀ ಜಯರಾಮ್ ಅವರ ಚೆನ್ನೈ ನಿವಾಸಕ್ಕೂ ಖಾಸಗಿ ಪೂಜೆಗೆ ಕರೆದೊಯ್ದಿರುವುದು ಅಚ್ಚರಿಗೆ ಕಾರಣವಾಗಿದೆ.
ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಪ್ರಕಾರ — “ದ್ವಾರಪಾಲಕ ಮೂರ್ತಿಗಳ ಕವಚಗಳು ಪದ್ಮಶ್ರೀ ಜಯರಾಮ್ ಅವರ ನಿವಾಸದಲ್ಲಿ ಪ್ರತಿಷ್ಠಾಪಿಸಲ್ಪಟ್ಟವು. ಬಳಿಕ ಪೂಜೆಗಳೊಂದಿಗೆ ಅವು ಶಬರಿಮಲೆಗೆ ಮರಳಿಸಲ್ಪಟ್ಟವು.” ಎಂದಿದೆ.
ವಿಜಯ್ ಮಲ್ಯ ನೀಡಿದ್ದ ದೇಣಿಗೆ
ಈ ಚಿನ್ನದ ಬಾಗಿಲುಗಳ ಪ್ರಾರಂಭವಾದಾಗ ಅದಕ್ಕೆ ದೇಣಿಗೆ ನೀಡಿದ್ದು ಉದ್ಯಮಿ ವಿಜಯ್ ಮಲ್ಯ! 1998ರಲ್ಲಿ ಅವರು 30 ಕೆ.ಜಿ ಚಿನ್ನವನ್ನು ಅವರು ದೇಣಿಗೆ ನೀಡಿದ್ದರು; ಮುಂದಿನ ವರ್ಷ 800 ಗ್ರಾಂ ಹೆಚ್ಚುವರಿ ಸೇರಿಸಲಾಯಿತು. ಆದರೆ ಹೈಕೋರ್ಟ್ ಮತ್ತು ವಿಜಿಲೆನ್ಸ್ ವರದಿಗಳು ಈ ದೇಣಿಗೆಯ ನಿಖರ ತೂಕದ ಕುರಿತು ಗಂಭೀರ ಪ್ರಶ್ನೆ ಎತ್ತುತ್ತಿವೆ.
ಹೈಕೋರ್ಟ್ ಆದೇಶ: SIT ತನಿಖೆ ಆರಂಭ
ನ್ಯಾಯಮೂರ್ತಿಗಳು ರಾಜ ವಿಜಯರಾಘವನ್ ಮತ್ತು ಕೆ.ವಿ. ಜಯಕುಮಾರ್ ಅವರ ಪೀಠವು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ADGP ಎಚ್. ವೆಂಕಟೇಶ್ ಅವರ ನೇತೃತ್ವದ ತಂಡಕ್ಕೆ ಆರು ವಾರಗಳ ಒಳಗೆ ವರದಿ ಸಲ್ಲಿಸಲು ಕೋರ್ಟ್ ಸೂಚಿಸಿದೆ. ಇದೇ ವೇಳೆ ದೇವಸ್ವಂ ಬೋರ್ಡ್‌ನ ದಾಖಲೆಗಳು, ತೂಕದ ವರದಿ ಹಾಗೂ ಹಸ್ತಾಂತರ ಪಟ್ಟಿ ವಶಪಡಿಸಿಕೊಳ್ಳುವಂತೆ ಆದೇಶಿಸಿದೆ. ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ ರಾಜಕೀಯ ಕದನಕ್ಕೆ ಕಾರಣವಾಗಿದ್ದು, ಭಕ್ತರ ಭಾವನೆಗಳಿಗೂ ಧಕ್ಕೆ ತಂದಿದೆ.
ಶಬರಿಮಲೆಯ ಚಿನ್ನ ಅಸಲಿಯೋ ನಕಲಿಯೋ?
ದೇವಸ್ವಂ ಬೋರ್ಡ್ ನಿಯಮಾನುಸಾರ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿಕೊಂಡಿದ್ದರೂ, ಹೈಕೋರ್ಟ್, “ಈಗ ದೇವಾಲಯದ ಬಾಗಿಲುಗಳಲ್ಲಿ ಅಳವಡಿಸಿರುವ ಫಲಕಗಳು ನಿಜವಾದ ಮೂಲ ಚಿನ್ನದ್ದೋ ಅಥವಾ ನಕಲಿಯೇ?” ಎಂದು ಪ್ರಶ್ನಿಸಿದೆ. ಕೋರ್ಟ್ ರಾಜ್ಯ ಪೊಲೀಸರಿಗೆ “ಬಾಗಿಲಿನ ಚಿನ್ನದ ದುರ್ಬಳಕೆ” ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ. SIT ತನಿಖೆಯು ತೂಕದ ದಾಖಲೆಗಳು ಮತ್ತು ಹಸ್ತಾಂತರ ಪಟ್ಟಿಯ ಅಸಂಗತತೆಗಳ ಬಗ್ಗೆ ಸ್ಪಷ್ಟನೆ ನೀಡಲಿದೆ.
(ಮೂಲ NDTV)