ಗಿರೀಶ್‌ ಮಟ್ಟಣ್ಣವರ್‌ ʻಬಾಂಬ್‌ʼ ಪ್ರಕರಣ: ಮರುತನಿಖೆಗೆ ದೂರು- ಎನ್‌ಐಎ ತನಿಖೆಗೆ ಆಗ್ರಹ

ಬೆಂಗಳೂರು: ವಿಧಾನಸೌಧದ ಬಳಿ ಬಾಂಬ್ ಇಟ್ಟಿದ್ದ ಆರೋಪದಿಂದ ಖುಲಾಸೆಯಾಗಿದ್ದ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ವಿರುದ್ಧ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ದೂರು ಸಲ್ಲಿಸಿದ್ದಾರೆ.

ಸಂಬರಗಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಗೃಹ ಕಾರ್ಯದರ್ಶಿಗೆ ಸಲ್ಲಿಸಿದ ದೂರಿನಲ್ಲಿ, ವಿಧಾನಸೌಧ ಬಾಂಬ್ ಪ್ರಕರಣ (ಕ್ರೈಂ ನಂ. 243/2005) ಅನ್ನು ಪುನರ್‌ತೆರೆದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವರ್ಗಾಯಿಸುವಂತೆ ಆಗ್ರಹಿಸಿದ್ದಾರೆ.

ದೂರಿನಲ್ಲಿ, ಗಿರೀಶ್ ಮಟ್ಟಣ್ಣವರ್ ತಾವೇ ಬಾಂಬ್ ತಯಾರಿಸಿ ಇಟ್ಟಿರುವುದಾಗಿ ಒಪ್ಪಿಕೊಳ್ಳುವ ರೀತಿಯ ಹಲವಾರು ವಿಡಿಯೋ ಹೇಳಿಕೆಗಳು ಲಭ್ಯವಿವೆ ಎಂದು ಸಂಬರಗಿ ತಿಳಿಸಿದ್ದಾರೆ.
“ಈ ವಿಡಿಯೋಗಳು ಹೊಸ ಸಾಕ್ಷ್ಯಾಧಾರಗಳಾಗಿ ಪರಿಗಣಿಸಬಹುದಾದ್ದರಿಂದ, ಕೋರ್ಟ್‌ನಲ್ಲಿ ಪ್ರಕರಣ ಖುಲಾಸೆಯಾಗಿದ್ದರೂ ಮರು ತನಿಖೆ ನಡೆಸುವುದು ಅಗತ್ಯ,” ಎಂದು ಅವರು ತಿಳಿಸಿದ್ದಾರೆ.

ಧರ್ಮಸ್ಥಳ ಷಡ್ಯಂತ್ರದ ಲಿಂಕ್‌?
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ವೇಳೆ, ದಾಳಿಕೋರರ ಗುರಿ ಧರ್ಮಸ್ಥಳವಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ ಗಿರೀಶ್ ಮಟ್ಟಣ್ಣವರ್ ಧರ್ಮಸ್ಥಳ ವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಸಂಬರಗಿ ದೂರಿನಲ್ಲಿ ಉಲ್ಲೇಖಿಸಿ, ಈ ಎರಡು ಪ್ರಕರಣಗಳ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ತನಿಖೆಯಿಂದ ಖಚಿತಪಡಿಸಬೇಕು ಎಂದು ಹೇಳಿದ್ದಾರೆ.

“ಸ್ಫೋಟಕ ತಯಾರಿಕೆ ಸುಲಭ” ಎಂದು ಹೇಳಿಕೆ
ಸಂಬರಗಿ ಅವರು ಸಲ್ಲಿಸಿದ ದೂರಿನಲ್ಲಿ, ಗಿರೀಶ್ ಮಟ್ಟಣ್ಣವರ್ ತಮ್ಮ ಕೆಲವು ವಿಡಿಯೋಗಳಲ್ಲಿ “ಜಿಲೆಟಿನ್ ಮತ್ತು ಇತರ ಸ್ಪೋಟಕ ವಸ್ತುಗಳಿಂದ ಬಾಂಬ್ ತಯಾರಿಸುವುದು ಸುಲಭ” ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ. ಈ ಹೇಳಿಕೆಗಳು ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವಂತಿವೆ ಎಂದು ಅವರು ಆರೋಪಿಸಿದ್ದಾರೆ.

ದಾಖಲೆಗಳು ಹಾಗೂ 15 ವಿಡಿಯೋಗಳೊಂದಿಗೆ ದೂರು ಸಲ್ಲಿಕೆ
ಪ್ರಶಾಂತ್ ಸಂಬರಗಿ ಅವರು ಹದಿನೈದು ವಿಡಿಯೋಗಳ ಜೊತೆಗೆ ಸಂಬಂಧಿತ ದಾಖಲೆಗಳನ್ನೂ ಸೇರಿಸಿ, ಪ್ರಕರಣದ ಮರು ತನಿಖೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
“ವಿಧಾನಸೌಧ ಹಾಗೂ ಶಾಸಕರ ಭವನ ಬಾಂಬ್ ಪ್ರಕರಣಗಳನ್ನು NIA ತನಿಖೆಗೆ ಒಳಪಡಿಸಿ, ನಿಜಾಸ್ತಿ ಬಹಿರಂಗಪಡಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.

error: Content is protected !!