ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ಬಿದ್ದು ಕಿನ್ನಿಗೋಳಿಯ ಯುವತಿ ದುರ್ಮರಣ

ಮುಂಬೈ: ಜೋಗೇಶ್ವರಿ ಪೂರ್ವದ ಠಾಕೂರ್ ರಸ್ತೆಯ ಸಮೀಪದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ಬಿದ್ದು ಕಿನ್ನಿಗೋಳಿಯ ಯುವತಿ ಮೃತಪಟ್ಟಿರುವ ಘಟನೆ ನಡೆದಿದೆ.

ಕಿನ್ನಿಗೋಳಿ ಮೂಲದ ಸದ್ಯ ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಸಂಸ್ಕೃತಿ ಅಮೀನ್(22) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸಂಸ್ಕೃತಿ ಅಮೀನ್ ಮುಂಬೈನ ಕೋಟ್ಯಾನ್ ಕ್ಯಾಟರರ್ಸ್ ನ ಮಾಲೀಕರಾದ ಅನಿಲ್ ಮತ್ತು ಪದ್ಮಾವತಿ ಅಮೀನ್ ಅವರ ಏಕೈಕ ಪುತ್ರಿ. ಸಂಸ್ಕೃತಿ ಎಂದಿನಂತೆ ಬೆಳಿಗ್ಗೆ 9.30 ರ ಸುಮಾರಿಗೆ ಕೆಲಸಕ್ಕೆ ಹೋಗಲು ಮನೆಯಿಂದ ಹೊರಟಿದ್ದರು. ಅವರು ತಮ್ಮ ನಿವಾಸದಿಂದ ಕೆಲವೇ ಮೀಟರ್ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹತ್ತಿರದ ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ಅವರ ತಲೆಯ ಮೇಲೆ ಬಿದ್ದಿದೆ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಅವರ ತಂದೆ ಅನಿಲ್ ಅಮೀನ್ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ. ಕಟ್ಟಡದ ನಿರ್ಮಾಣದ ವೇಳೆ ಯಾವುದೇ ಸುರಕ್ಷತೆಯನ್ನು ಅವರು ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

error: Content is protected !!