ಮಂಗಳೂರು: ಜನರ ಜೀವ ಉಳಿಸುವ ವೈದ್ಯರೇ ಈಗ ಬೀದಿಗೆ ಬಂದು ತಮ್ಮ ಹಕ್ಕುಗಳಿಗಾಗಿ ಅಂಗಲಾಚುವ ಸ್ಥಿತಿ ಬಂದಿದೆ ಎಂದರೆ ಈ ರಾಜ್ಯದ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ಅರ್ಥವಾಗುತ್ತದೆ!”
ದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮೊಳಗಿದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷ ಡಾ. ದೀಪಕ್ ರೈ ಅವರ ಆಕ್ರೋಶದ ನುಡಿಗಳು.

ಸರ್ಕಾರದ ಮಲತಾಯಿ ಧೋರಣೆ ಹಾಗೂ ಆರೋಗ್ಯ ಇಲಾಖೆಯ ಅದಕ್ಷತೆಯ ವಿರುದ್ಧ ಸಿಡಿದೆದ್ದ ವೈದ್ಯರು, ಮಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥೆಯ ಹಸಿಬಿಸಿ ನ್ಯೂನತೆಗಳನ್ನು ಬಿಚ್ಚಿಟ್ಟರು.
50 ವರ್ಷದ ಹಳೆಯ ನಿಯಮಕ್ಕೆ ಅಂಟಿಕೊಂಡ ಸರ್ಕಾರ!
“ನಾವು 21ನೇ ಶತಮಾನದಲ್ಲಿದ್ದೇವೆ, ಆದರೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು ಮಾತ್ರ ಇನ್ನೂ 1973ರ ಕಾಲದಲ್ಲಿವೆ!” ಎಂದು ಸಂಘದ ಅಧ್ಯಕ್ಷರು ಕಿಡಿಕಾರಿದರು. ಕಳೆದ 50 ವರ್ಷಗಳಿಂದ ನಿಯಮ ತಿದ್ದುಪಡಿ ಮಾಡದೆ, 5 ವರ್ಷಗಳಿಂದ ಯಾರೊಬ್ಬರಿಗೂ ಮುಂಬಡ್ತಿ (Promotion) ನೀಡದೆ ವೈದ್ಯರ ಬದುಕಿನೊಂದಿಗೆ ಆಟವಾಡುತ್ತಿರುವ ಸರ್ಕಾರದ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧ ಸರಬರಾಜು ಮಾಡಲು ಸಾಧ್ಯವಾಗದ ಇಲಾಖೆಯು ಸಾರ್ವಜನಿಕರಿಗೆ ಯಾವ ಆರೋಗ್ಯ ಭಾಗ್ಯ ನೀಡುತ್ತಿದೆ ಎಂದು ಪ್ರಶ್ನಿಸಿದ ಅವರು, ಕೇಂದ್ರ ಪುರಸ್ಕೃತ ಯೋಜನೆ ಅಡಿ ದುಡಿಯುವ 6,000 ನೌಕರರಿಗೆ 4 ತಿಂಗಳಿಗೊಮ್ಮೆ ಸಂಬಳ ನೀಡುವ ಮೂಲಕ ಅವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದು ಗುಡುಗಿದರು.
ಸಂಘದ ಪ್ರಮುಖ ಬೇಡಿಕೆಗಳು ಇಲ್ಲಿವೆ:
ಕೌನ್ಸಿಲಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ವರ್ಗಾವಣೆಗಳನ್ನು ತಕ್ಷಣ ನಿಲ್ಲಿಸಬೇಕು.
ವೇತನ ತಾರತಮ್ಯ ಹೋಗಲಾಡಿಸಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿಯಲ್ಲೇ ಸಿ.ಜಿ.ಹೆಚ್.ಎಸ್ ವೇತನ ಶ್ರೇಣಿ ಜಾರಿಗೊಳಿಸಬೇಕು.
ಖಾಲಿ ಹುದ್ದೆ ಭರ್ತಿ ಮಾಡಬೇಕು- ಸಾವಿರಾರು ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ವೈದ್ಯರ ಮೇಲೆ ಅತಿಯಾದ ಕೆಲಸದ ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕು.
ಗುತ್ತಿಗೆ ನೌಕರರ ರಕ್ಷಣೆ: ಎನ್.ಹೆಚ್.ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಲು ಸಂಘವು ಪಟ್ಟು ಹಿಡಿದಿದೆ.

ಸರಕಾರಕ್ಕೆ ಡಾಕ್ಟರ್‌ಗಳ ಅಂತಿಮ ಗಡುವು:
ಮಾ. 16ರಿಂದ ಚಿಕಿತ್ಸೆ ಬಂದ್ ಎಚ್ಚರಿಕೆ!
“ಮಾ. 10ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಕಠಿಣ ಹೋರಾಟ ಫಿಕ್ಸ್” ಎಂದು ಸರಕಾರಿ ವೈದ್ಯಾಧಿಕಾರಿಗಳ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ. ಮಾ. 11ರಿಂದ 15ರವರೆಗೆ ಕಪ್ಪು ಪಟ್ಟಿ ಧರಿಸಿ ಕೇವಲ ತುರ್ತು ಸೇವೆಗೆ ಸೀಮಿತವಾಗಲಿರೋ ವೈದ್ಯರು, ಒಂದು ವೇಳೆ ಸರಕಾರ ಬಗ್ಗದಿದ್ದರೆ ಮಾ. 16ರಿಂದ ಸಂಪೂರ್ಣವಾಗಿ ಕೆಲಸ ನಿಲ್ಲಿಸಿ ಬೀದಿಗೆ ಇಳಿಯೋದಾಗಿ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಾ. ಅಕ್ಷತಾ, ಉಪಾಧ್ಯಕ್ಷರಾದ ಡಾ. ಶರತ್ ಬಾಬು ಹಾಗೂ ಡಾ. ರಾಜೇಶ್, ಖಜಾಂಜಿ ಡಾ. ತುಫೈಲ್, ಆರೋಗ್ಯ ಇಲಾಖೆಯ ಎಲ್ಲ ವೃಂದದ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷೆ ಮಹಾಲಕ್ಷ್ಮಿ, ಕಾರ್ಯದರ್ಶಿ ಯೋಗೇಶ್ ಉಪಸ್ಥಿತರಿದ್ದರು.