ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸಲು ಅನುಕೂಲ ಕಲ್ಪಿಸಲು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಸರಾ ರಜೆಯನ್ನು ಅ.18ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಂದು ಕೊನೆ ದಿನವಾಗಿದ್ದರಿಂದ ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಶಿಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಸಮೀಕ್ಷೆ ಪೂರ್ಣಗೊಳಿಸಲು ತೀರ್ಮಾನ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಅಕ್ಟೋಬರ್ 18ರವರೆಗೆ ರಾಜ್ಯದ ಎಲ್ಲಾಸರ್ಕಾರಿ ಶಾಲೆಗಳಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ.
ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಲಾಗಿತ್ತು. ನಿಗದಿತ ಅವಧಿಯಂತೆ ಇಂದು ಕೊನೆಯ ದಿನ. ಆದರೆ, ಕೆಲವು ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಇನ್ನೂ ಪೂರ್ಣ ಆಗಿಲ್ಲ. ಕೊಪ್ಪಳದಲ್ಲಿ ಶೇ 97, ದಕ್ಷಿಣ ಕನ್ನಡ, ಉಡುಪಿಯಲ್ಲಿ ಶೇ 63ರಷ್ಟು ಆಗಿದೆ. ಇಡೀ ರಾಜ್ಯದಲ್ಲಿ ನಮ್ಮ ನಿರೀಕ್ಷೆಯಂತೆ ಸರ್ವೆ ಕಾರ್ಯ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
1.20 ಲಕ್ಷ ಶಿಕ್ಷಕರು ಹಾಗೂ ಇತರೆ ಅಧಿಕಾರಿ ವರ್ಗದ 60 ಸಾವಿರ ಜನ ಭಾಗವಹಿಸಿದ್ದಾರೆ. ಶಿಕ್ಷಕರ ಸಂಘಟದ ಮನವಿ ಮೇರೆಗೆ ಶಾಶ್ವತ ಹಿಂದುಳಿದ ವರ್ಗಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸರ್ವೆ ಕಾರ್ಯದಲ್ಲಿ ಶಿಕ್ಷಕರು ತೊಡಗಿಸಿಕೊಳ್ಳುವ ಸಲುವಾಗಿ ಎಂಟು ದಿನ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದರು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರನ್ನು ಬಿಟ್ಟು ಉಳಿದವರು ಸರ್ವೆಯಲ್ಲಿ ತೊಡಗಿಸಿಕೊಳ್ಳಬಹುದು. ಬೆಂಗಳೂರಿನಲ್ಲಿ ಸರ್ವೆ ಪ್ರಗತಿ ಕಾಣುವ ಸಲುವಾಗಿ ದೀಪಾವಳಿಗೂ ಮೊದಲು ಸರ್ವೆ ಕಾರ್ಯ ಮುಕ್ತಾಯ ಮಾಡಲು ಸೂಚಿಸಿದ್ದೇವೆ .ಒಟ್ಟಾರೆ ಹನ್ನೆರಡು ದಿನಗಳ ಕಾಲ ಸಮೀಕ್ಷೆ ಕಾಲಾವಧಿ ವಿಸ್ತರಿಸಲು ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ. ಸಮೀಕ್ಷೆಯಲ್ಲಿ ಭಾಗವಹಿಸದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು. ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವಾಗ ಮೂವರು ಸಿಬ್ಬಂದಿ ಮೃತರಾಗಿದ್ದರು. ಅವರಿಗೆ ತಲಾ ₹ 20 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಸರ್ವೆಯಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ₹ 20 ಸಾವಿರ ಗೌರವ ಧನ ನೀಡಲಾಗತ್ತೆ. ಈ ಹಿಂದೆ ₹ 5 ಸಾವಿರ ನೀಡಲಾಗಿತ್ತು. ಈಗ ಅದರ ಬಾಕಿ ಹಣ ನೀಡಲಾಗುವುದು. ಅಕ್ಟೋಬರ್ 19ರೊಳಗೆ ಸರ್ವೆ ಪೂರ್ಣಗೊಳಿಸಲು ಸೂಚಿಸುತ್ತಿದ್ದೇವೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ಮಕ್ಕಳ ಪಠ್ಯಕ್ರಮಕ್ಕೆ ತೊಂದರೆ ಆಗದಂತೆ ವಿಶೇಷ ತರಗತಿಗಳನ್ನು ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ನಡೆಸುವುದಾಗಿ ಶಿಕ್ಷಕರ ಸಂಘ ಹೇಳಿಕೊಂಡಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.