ಅ.9-10ರ ವರೆಗೆ ಶ್ರೀನಿವಾಸ ಟೆಕ್ನಾಲಜಿಯಲ್ಲಿ ಅಂತಾರಾಷ್ಟ್ರೀಯ ಹ್ಯಾಕಥಾನ್‌

ಮಂಗಳೂರು: ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಾಳಚಿಲ್ ಸಂಸ್ಥೆಯು ಅಂತರಾಷ್ಟ್ರೀಯ ಹ್ಯಾಕಥಾನ್ “Srinathon-25” ಕಾರ್ಯಕ್ರಮವನ್ನು ಅಕ್ಟೋಬರ್ 9 ಮತ್ತು 10 ರಂದು ಆಯೋಜಿಸುತ್ತಿದ್ದು, ಈ ಮೂಲಕ ಇಂಜಿನಿಯರಿಂಗ್ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ತರಿಸಿ, ನಿಜ ಜೀವನದ ಸವಾಲುಗಳಿಗೆ ನವೀನ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲು ಪ್ರೇರೇಪಿಸಲಾಗುವುದು ಎಂದು ಆಯೋಜಕರು ತಿಳಿಸಿದರು..

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯೋಜಕರು, ಈವರೆಗೆ 114 ತಂಡಗಳು ಕಾರ್ಯಕ್ರಮಕ್ಕೆ ನೋಂದಾಯಿಸಿದ್ದು, ಉಲ್ಸ್ಟರ್ ವಿಶ್ವವಿದ್ಯಾಲಯ (Ulster University, Belfast, UK) ನಿಂದಲೂ ಒಂದು ಅಂತಾರಾಷ್ಟ್ರೀಯ ತಂಡ ಭಾಗವಹಿಸುತ್ತಿರುವುದು ವಿಶೇಷ. ಇದು ಜಾಗತಿಕ ಸಹಕಾರ ಮತ್ತು ಜ್ಞಾನ ವಿನಿಮಯದತ್ತ ಮಹತ್ತರ ಹೆಜ್ಜೆಯಾಗಿದೆ ಎಂದರು.

24 ಗಂಟೆಗಳ ಅವಧಿಯ ಈ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳು ಕೈಗಾರಿಕಾ ಸಂಸ್ಥೆಗಳಿಂದ ನೈಜ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲಿದ್ದಾರೆ. ಸಂಸ್ಥೆಗಳಿಗೆ ಹೊಸ ದೃಷ್ಟಿಕೋನದ ಪರಿಹಾರ ಸಿಗುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ನೈಜ ಕೈಗಾರಿಕಾ ಅನುಭವ ದೊರೆಯಲಿದೆ ಎಂದರು.

ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಶ್ರೀನಿವಾಸ ಮೈಯ್ಯ ಡಿ ಅವರ ನೇತೃತ್ವದಲ್ಲಿ, ಸಂಯೋಜಕರಾದ ಶೈಲೇಶ್ ಶೆಟ್ಟಿ ಹಾಗೂ ಡಾ. ಧೀರಜ್ ಹೆಬ್ರಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ. ಡಾ. ಸಿಎ. ರಾಘವೇಂದ್ರ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ, ಕಾರ್ಯಕ್ರಮದ ಅಧ್ಯಕ್ಷರಾಗಿದ್ದು, ಡಾ. ಎ. ಶ್ರೀನಿವಾಸ ರಾವ್, ಉಪಕುಲಾಧಿಪತಿಗಳು ಹಾಗೂ ಡಾ. ಕಿರಣ್ ರಾಜಣ್ಣ, ಎಥನೋಟೆಕ್ ಅಕಾಡೆಮಿ ಅಧ್ಯಕ್ಷರು ಮುಖ್ಯ ಅತಿಥಿಗಳಾಗಲಿದ್ದಾರೆ.

ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ವಿದೇಶದಿಂದಲೂ ತಂಡಗಳು ಭಾಗವಹಿಸುತ್ತಿರುವ ಈ ಹ್ಯಾಕಥಾನ್, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಉದ್ಯೋಗಾವಕಾಶಗಳ ದಾರಿಯಾಗುವ ನಿರೀಕ್ಷೆಯಿದೆ. “Srinathon-25” ನವೀನತೆ, ಸಹಕಾರ ಮತ್ತು ತಾಂತ್ರಿಕ ಶ್ರೇಷ್ಠತೆಯ ಉತ್ಸವವಾಗಿ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವಿನ ಬಲವಾದ ಸೇತುವೆಯಾಗಿ ಹೊರಹೊಮ್ಮುತ್ತಿದೆ ಎಂದರು.

error: Content is protected !!