ಮಂಗಳೂರು: ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್ ಕಲೆ ಪ್ರಚಾರ ಮತ್ತು ಉತ್ತೇಜನಕ್ಕಾಗಿ ‘ಆಮಿ ಆನಿ ಆಮ್ಚಿಂ’ ಸಂಸ್ಥೆಯು ಆಯೋಜಿಸಿರುವ ‘ಪೆಪೆರೆ ಪೆಪೆ ಢುಂ’ ಸ್ಪರ್ಧೆಯ ಎರಡನೇ ಆವೃತ್ತಿ ಅಕ್ಟೋಬರ್ 10 ರಂದು ಒಮಾನ್ ರಾಜಧಾನಿ ಮಸ್ಕತ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡೆನಿಸ್ ಡಿಸಿಲ್ವಾ ಹೇಳಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಮಸ್ಕತ್‌ನ ರುವಿಯ ಅಲ್ ಫಲಾಜ್ ಹೋಟೆಲ್‌ನಲ್ಲಿ ನಡೆಯುವ ಈ ಸಂಗೀತ ಮೇಳವನ್ನು ಎಂಸಿಸಿಪಿ ಅಧ್ಯಕ್ಷ ಲ್ಯಾನ್ಸಿ ಲೋಬೊ, ‘ಆಮಿ ಆನಿ ಆಮ್ಚಿಂ’ ತಂಡ ಹಾಗೂ ವೆಂಚರ್ ಎಂಟರ್‌ಟೇನ್‌ಮೆಂಟ್ ತಂಡ ಮುನ್ನಡೆಸಲಿದೆ. ‘ಮಸ್ಕತ್ ಚಿಂ ನಕ್ತಿರಾಂ’, ‘ದಬಕ್ ದಬಾ ಕಲಾಕಾರ್’, ‘ಗಾಂವ್ಚಿಂ ಮೋತಿಯಾಂ’ ಮತ್ತು ‘ತೆನ್ನಾಂತ್ಲಿಂ ತಾಲೆಂತಾಂ’ ಎಂಬ ನಾಲ್ಕು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಕೊಂಕಣಿ ಹಾಡುಗಳು, ಬಾಯ್ಲಾ ನೃತ್ಯ, ವಾಲ್ಟ್ಚ್, ಜೈವ್ ಹಾಗೂ ಹುಲಿ ನೃತ್ಯ ಮುಂತಾದ ವಿಭಾಗಗಳಲ್ಲಿ ಪ್ರತಿಭೆ ಪ್ರದರ್ಶಿಸಲಿವೆ ಎಂದರು.
ವಿಜೇತ ತಂಡಕ್ಕೆ 1,000 ಒಮಾನಿ ರಿಯಲ್ (ಸುಮಾರು ₹2.3 ಲಕ್ಷ) ಹಾಗೂ ಉಳಿದ ಮೂವರು ತಂಡಗಳಿಗೆ ತಲಾ 500 ಒಮಾನಿ ರಿಯಲ್ (ಸುಮಾರು ₹1.15 ಲಕ್ಷ) ಬಹುಮಾನ ನೀಡಲಾಗುವುದು. ಬಸ್ಮಾರ್‌ನ ಅರುಣ್ ಸೆರಾವೊ ನೇತೃತ್ವದ ಹತ್ತು ಮಂದಿಯ ಬ್ರಾಸ್ ಬ್ಯಾಂಡ್ ವಾದಕರ ತಂಡವು ಸ್ಪರ್ಧೆಗೆ ಸಂಗೀತ ಒದಗಿಸಲಿದೆ. ಕಾರ್ಯಕ್ರಮದ ಕಾರ್ಯನಿರ್ವಹಣೆಯನ್ನು ಸಂತೋಷ್ ಡಿಕೋಸ್ತಾ, ರೀನ ಕ್ಯಾಸ್ಟಲಿನೊ ಹಾಗೂ ಅರುಣ್ ಡಿಸೋಜಾ ವಹಿಸಿಕೊಂಡಿದ್ದಾರೆ ಎಂದರು.
ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ಮುಖ್ಯ ಅತಿಥಿಯಾಗಿದ್ದು, ವಂ. ಸ್ಟೀಫನ್ ಲುವಿಸ್, ವಂ. ಸಿಲ್ವೆಸ್ಟರ್ ಡಿಕೊಸ್ಮಾ, ಯುಟಿ ಇಫಿಕಾರ್ ಫರೀದ್, ವಾಲ್ಮರ್ ನಂದಳಿಕೆ ಹಾಗೂ ಅಲೆಕ್ಸಿಸ್ ಕ್ಯಾಸ್ಟಲಿನೊ ಉಪಸ್ಥಿತರಿರುತ್ತಾರೆ. ‘ಪೆಪೆರೆ ಪೆಪೆ ಢುಂ’ ಕಾರ್ಯಕ್ರಮದ ಮೊದಲ ಆವೃತ್ತಿ 2024ರ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆದಿದ್ದು, ಅದರ ಯಶಸ್ಸಿನಿಂದ ಪ್ರೇರಿತವಾಗಿ ಈ ಬಾರಿ ಅದನ್ನು ಗಲ್ಫ್ ರಾಷ್ಟ್ರಕ್ಕೆ ವಿಸ್ತರಿಸಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ʻಆಮಿ ಆನಿ ಆಮ್ಚಿಂ’ ಸಂಸ್ಥೆ ಸಂತೋಷ್ ಡಿಕೊಸ್ತಾ, ಕಾರ್ಯದರ್ಶಿ ಲೊಯ್ಡ್ ರೇಗೊ, ಸದಸ್ಯ ಮೆಲ್ವಿನ್ ಡೆಸಾ ಉಪಸ್ಥಿತರಿದ್ದರು.