ರಾಜಸ್ಥಾನ: ನಗರದ ಬಿಜೆಪಿ ನಾಯಕ ರಮೇಶ್ ರುಲಾನಿಯಾ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಮೂವರು ಮುಸುಕುಧಾರಿಗಳು ಅವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಇಂದು(ಅ.7) ಬೆಳಗ್ಗೆ 5:30ರ ಸುಮಾರಿಗೆ ನಡೆದಿದೆ.
ಗಾಯಗೊಂಡ ರುಲಾನಿಯಾ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಮಧ್ಯೆ ಆರೋಪಿಗಳನ್ನು ಹುಡುಕಲು ಪೊಲೀಸರು ಸಕ್ರಿಯರಾದರೂ ಶಂಕಿತರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಪೊಲೀಸ್ ವರಿಷ್ಠಾಧಿಕಾರಿ ರಿಚಾ ತೋಮರ್ ಅವರು ಕುಚಮನ್ ನಗರಕ್ಕೆ ಆಗಮಿಸಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇಮಿಚಂದ್ ಖರಿಯಾ ಮತ್ತು ಸಿಒ ಅರವಿಂದ್ ಬಿಷ್ಣೋಯ್ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ರಿಚಾ ತೋಮರ್ ಅವರು ಮಾತನಾಡಿದ್ದು, ‘ಮಂಗಳವಾರ ಬೆಳಗ್ಗೆ 5:30ರ ಸುಮಾರಿಗೆ ರಮೇಶ್ ರುಲಾನಿಯಾ ಸ್ಟೇಷನ್ ರಸ್ತೆಯಲ್ಲಿರುವ ಜಿಮ್‌ಗೆ ವ್ಯಾಯಾಮ ಮಾಡಲು ಹೋಗಿದ್ದಾಗ ಮುಸುಕುಧಾರಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಶಂಕಿತರು ಎರಡು ವಾಹನಗಳಲ್ಲಿ ಬಂದಿದ್ದರೆಂದು ವರದಿಯಾಗಿದೆ. ಅವರು ತಮ್ಮ ವಾಹನಗಳನ್ನು ಕೆಳಗಿನ ರಸ್ತೆಯಲ್ಲಿ ನಿಲ್ಲಿಸಿ, ಮುಖವಾಡಗಳನ್ನು ಧರಿಸಿ, ಎರಡನೇ ಮಹಡಿಯಲ್ಲಿರುವ ಜಿಮ್‌ಗೆ ಹೋಗಿದ್ದಾರೆ. ಅಲ್ಲಿ ಅವರು ರಮೇಶ್ ರುಲಾನಿಯಾ ಮೇಲೆ ಗುಂಡು ಹಾರಿಸಿ, ಗುಂಡಿನ ದಾಳಿಯ ನಂತರ ದಾಳಿಕೋರರು ತಮ್ಮ ವಾಹನಗಳಲ್ಲಿ ಪರಾರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಬೈಕ್ ಏಜೆನ್ಸಿ ನಿರ್ವಾಹಕ ರಮೇಶ್ ರುಲಾನಿಯಾ ಅವರಿಗೆ ಇತ್ತೀಚೆಗೆ ರೋಹಿತ್ ಗೋದಾರ ಗ್ಯಾಂಗ್ನಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೆ ಮರಣೋತ್ತರ ಪರೀಕ್ಷೆ ನಡೆಸುವುದಿಲ್ಲ. ಪೊಲೀಸರು ಇಡೀ ರಾಜ್ಯದಲ್ಲಿ ಸರ್ಪಗಾವಲಿನಲ್ಲಿದ್ದಾರೆ ಎಂದು ಹೇಳಿದ್ದಾರೆ.