ಬೆಂಗಳೂರು: ಪುಟ್ಟಗೌರಿ ಧಾರಾವಾಹಿಯ ಮೂಲಕ ಮನೆಮಾತಾದ ನಟಿ ಸಾನ್ಯಾ ಅಯ್ಯರ್, ಇದೀಗ ತಮ್ಮ ಬಾತ್ ಟಬ್ ವಿಡಿಯೋ ಹಂಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣರಾಗಿದ್ದಾರೆ.
ಮೈಸೂರ್ ಸ್ಯಾಂಡಲ್ ಸಂಸ್ಥೆಗಾಗಿ ಮಾಡಿದ ಈ ಪ್ರಚಾರ ಚಿತ್ರೀಕರಣದ ‘ಬಿಹೈಂಡ್ ದ ಸೀನ್ಸ್ (BTS)’ ವಿಡಿಯೋ ಅನ್ನು ಸಾನ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಅನೇಕರಿಂದ ಶ್ಲಾಘನೆಗಳೂ ಬಂದಿದೆ.
ಸಾನ್ಯಾ ಅಯ್ಯರ್ ಅವರು ಬಾಲ ನಟಿಯಾಗಿ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದರು. ನಂತರ ಅರಾರೋ ನೀಯಾರೋ ಆಲ್ಬಂ ಸಾಂಗ್, ಬಿಗ್ ಬಾಸ್ ಕನ್ನಡ OTT ಸೀಸನ್ 1, ಮತ್ತು ಇತ್ತೀಚಿನ ಗೌರಿ ಸಿನಿಮಾದ ಮೂಲಕ ತಮ್ಮ ಕಲಾತ್ಮಕ ಸಾಮರ್ಥ್ಯ ತೋರಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಸಾನ್ಯಾ ಅಯ್ಯರ್ ಅವರಿಗೆ ಕಳೆದ ವರ್ಷ ಸೈಮಾ ಪ್ರಶಸ್ತಿ ಲಭಿಸಿತ್ತು. ಪ್ರಸ್ತುತ ಅವರು ಹಲವು ಕಾರ್ಯಕ್ರಮಗಳಲ್ಲಿ ಹಾಗೂ ಬ್ರ್ಯಾಂಡ್ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಸಾನ್ಯಾ ಅಯ್ಯರ್ ‘ಉಪಶಮನ’ ಎಂಬ ಆತ್ಮಪರಿಚಯ ಮತ್ತು ಹೀಲಿಂಗ್ ಕಾರ್ಯಾಗಾರ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. “ಸ್ವತಃನನ್ನು ಅರಿಯಲು ಹಾಗೂ ಆಂತರಿಕ ಶಾಂತಿ ಪಡೆಯಲು ನೆರವಾಗುವ ಪ್ರಯತ್ನ” ಎಂದು ಅವರು ಈ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಸಾನ್ಯಾ ಅಯ್ಯರ್ ಅವರು ತಮ್ಮ ಕಲಾ–ವೈಯಕ್ತಿಕ ಪ್ರಯಾಣವನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.