ಯುವಕನ ಕ್ಯಾನ್ಸರ್ ಚಿಕಿತ್ಸೆಗೆ ಕಾಲ್ನಡಿಗೆ ಜಾಥಾ ನಡೆಸಿ ದೇಣಿಗೆ ಸಂಗ್ರಹಿಸಿ ಮಾದರಿಯಾದ ನಾಗರಿಕರು!

ಸುರತ್ಕಲ್‌: ಕೃಷ್ಣಾಪುರ ನಿವಾಸಿ ಮುಹಮ್ಮದ್ ಫರ್ವೇಝ್ (24) ಮಾರಕ‌ ಕ್ಯಾನ್ಸರ್ ನಿಂದ ಬಳಲುತ್ತಿದ್ದಿದ್ದು, ಅವರ ಚಿಕಿತ್ಸೆಗಾಗಿ ಊರಿನ ನಾಗರಿಕರು ರವಿವಾರ ಒಂದಾಗಿ ಕಾಲ್ನಡಿಗೆ ಜಾಥಾ ಮೂಲಕ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ವಿಶೇಷ ಕಾರ್ಯಕ್ರಮ ನಡೆಸಿ ಇತರರಿಗೆ ಮಾದರಿಯಾದರು.
ಕಳೆದ 5 ವರ್ಷಗಳಿಂದ ರಕ್ತದ ಕ್ಯಾನ್ಸರ್ರ್ ಗೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೊದಲು ಒಂದು ಬಾರಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದ ಫರ್ವೇಝ್ ಗೆ ಮತ್ತೆ‌ ರೋಗ ಉಲ್ಬಣಿಸಿದೆ. ಇದರಿಂದ ಮನೆಮಂದಿ ಕಂಗೆಟ್ಟಿದ್ದಾರೆ. ಮನೆಯವರು,‌ ಕುಟುಂಬಸ್ಥರು ಹಾಗೂ ಊರಿನ ದಾನಿಗಳ ನೆರವು ಪಡೆದು ಮೊದಲು ಚಿಕಿತ್ಸೆ ಕೊಡಿಸಿದ್ದರು. ಆದರೆ ಈಗ ಮತ್ತೆ ರೋಗ ಉಲ್ಬಣಿಸಿದ್ದು, ಚಿಕಿತ್ಸೆಗಾಗಿ 60ಲಕ್ಷ ರೂ.ಗಳ‌ ಬೃಹತ್ ಮೊತ್ತ ಬೇಕಾಗಿದೆ. ಸದ್ಯ 17 ಲಕ್ಷ ರೂ. ಸಂಗ್ರಹವಾಗಿದೆ. ಉಳಿದ 53 ಲಕ್ಷ ರೂ. ಹಣ ಹೊಂದಿಸಲಾಗದೆ ಮನೆಮಂದಿ ಕಂಗಾಲಾಗಿದ್ದು ಸಾರ್ವಜನಿಕರ ಸಹಕಾರದ ನಿರೀಕ್ಷೆಯಲ್ಲಿದ್ದಾರೆ.
ಮನೆಯವರ ಕಷ್ಟ ಅರಿತು ಗ್ರಾಮಸ್ಥರಾದ ನಾವು ಒಂದಾಗಿ ನಮ್ಮ ಊರಿನ ಯುವಕನ ಚಿಕಿತ್ಸೆಗೆ ನೆರವಾಗಬೇಕೆಂದು ಒಂದು ತಂಡ ಮಾಡಿಕೊಂಡು ಸುರತ್ಕಲ್ ಚೊಕ್ಕಬೆಟ್ಟುವಿನಿಂದ ಕಾಟಿಪಳ್ಳ ಸಂಶುದ್ದೀನ್ ವೃತ್ತದ ವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಸಾರ್ವಜನಿಕರು, ಅಂಗಡಿ ಡಿ ಮುಂಗಟ್ಟುಗಳಿಗೆ ತೆರಳಿ ಫರ್ವೇಝ್‌ ಅವರ ಚಿಕಿತ್ಸೆಗಾಗಿ ಹಣ ಸಂಗ್ರಹಿಸಿತ್ತಿದ್ದೇವೆ. ಜೊತೆಗೆ ಮನೆ ಮನೆಗಳಿಗೆ ತೆರಳಿ ಹಣ ಸಂಗ್ರಸುವವರಿದ್ದೇವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಫರ್ವೇಝ್‌ ಅವರ ಚಿಕಿತಸೆಗೆ ನಮ್ಮೊಂದಿಗೆ ಕೈಜೋಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್‌ ಮಜೀದ್‌ ಮಂಗಳಪೇಟೆ ಅವರು ಮನವಿ ಮಾಡಿದರು.
ಜಾಥಾದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸ್ಥಳೀಯರಾದ ನವಾಝ್ ಅವರು, “26 ವರ್ಷದ ಯುವಕ‌ ಮುಹಮ್ಮದ್ ಫರ್ವೇಝ್ ಅವರು ಮಾರಕ‌ ಕ್ಯಾನ್ಸರ್ ನಿಂದಾಗಿ ಕಳೆದ 5ವರ್ಷಗಳಿಂದ ಬಳಲುತ್ತಿದ್ದು, ನರಕಯಾತನೆ ಅನುಭವಿಸುತ್ತಿದ್ದಾರೆ. ಅವರನ್ನು ಗುಣಮುಖರನ್ನಾಗಿಸಿ ಕುಟುಂಬದ ನೋವಿಗೆ ಸ್ಪಂದಿಸುವ ಸಲುವಾಗಿ ಗ್ರಾಮಸ್ಥರಾದ ನಾವೆಲ್ಲ ಒಂದುಗೂಡಿ ಹಿರಿಯರ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿದ್ದೇವೆ. ಈ ನಡಿಗೆ ಇಲ್ಲಿಗೆ ನಿಲ್ಲುವುದಿಲ್ಲ. ಇದು ಫರ್ವೇಝ್ ಅವರ ಚಿಕಿತ್ಸೆಯ ಮೊತ್ತ 60 ಲಕ್ಷ ರೂ. ಒಗ್ಗೂಡುವವರೆಗೆ ಮುಂದುವರಿಯಲಿದೆ. ಅವರ ಜೀವ ಉಳಿಸುವ ಮಹತ್ ಕಾರ್ಯಕ್ಕೆ ನಾಗರೀಕರು ಜಾತಿ, ಧರ್ಮಗಳನ್ನು ಮೀರಿ ಧನಸಹಾಯ ಮಾಡುತ್ತಿದ್ದಾರೆ“ ಎಂದು ನುಡಿದರು.
‌ಫರ್ವೇಝ್‌ ಅವರ ಚಿಕಿತ್ಸೆಗೆ ಧನ ಸಹಾಯ ಮಾಡಲು ಇಚ್ಚಿಸುವವರು ಈ ಕೆಳಗಿನ ಅವರ ಸಹೋದರ ಮುಹಮ್ಮದ್‌ ಫೈಝಲ್‌ ಅವರ ಮಂಗಳೂರು ಕೆನರಾ ಬ್ಯಾಂಕ್‌ ಖಾತೆ 120036669591, Ifsc ಕೋಡ್‌ CNRB0010241 ಗೆ ಜಮಾ ಮಾಡಬಹುದಾಗಿದೆ..

ನನ್ನ ಸ್ನೇಹಿತ ಫರ್ವೇಝ್‌ ನ ಚಿಕಿತ್ಸೆಗೆ 60 ಲಕ್ಷ ರೂ. ಬೇಕಿದೆ. ಕೇವಲ 17 ಲಕ್ಷ ರೂ. ಹೊಂದಿಸಿದ್ದೇವೆ. ಇನ್ನೂ 43ಲಕ್ಷ ರೂ. ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರ ಊರಿನವರು ಸೇರಿಕೊಂಡು ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೃತಜ್ಞತೆಗಳು“
-ಅಬ್ದುಲ್ ಮಜೀದ್, ಫರ್ವೇಝ್‌ ಅವರ ಸ್ನೇಹಿತ‌

”ನನ್ನ ಸಹೋದರನಿಗೆ ಕ್ಯಾನ್ಸರ್‌ ಎಂದು ತಿಳಿದಾಗ ಕುಟುಂಬವೇ ಕಂಗಾಲಾಗಿತ್ತು. ಈ ಮೊದಲು ಮನೆಯವರು, ಕುಟುಂಬಸ್ಥರು ಹಾಗೂ ನಾಗರೀಕರ ಸಹಕಾರದಿಂದ ಚಿಕಿತಸೆ ಕೊಡಿಸಿದ್ದೆವು. ಆದರೆ ಈ ಮತ್ತೆ ಕಾಯಿಲೆ ಉಲ್ಬಣಗೊಂಡಿದ್ದು, ತಕ್ಷಣವೇ ಚಿಕತ್ಸೆ ಕೊಡಿಸುವಂತೆ ವೈದ್ಯರು ಹೇಳಿದ್ದಾರೆ. ಹಾಗಾಗಿ ನಮ್ಮ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ನನ್ನ ಸಹೋದರನ ಚಿಕಿತ್ಸೆಗಾಗಿ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಹಣ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರಿಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕೆಂದೇ ತಿಳಿಯುತ್ತಿಲ್ಲ. ಎಲ್ಲರ ಹಾರೈಕೆ, ಸಹಾಯದಿಂದ ನನ್ನ ಸಹೋದರ ಕಾಯಿಲೆಯಿಂದ ಗುಣಮುಖನಾದರೆ ಸಾಕು ಎಂಬುದಷ್ಟೇ ನಮ್ಮ ಪ್ರಾರ್ಥನೆ.
– ಮುಹಮ್ಮದ್‌ ಫೈಝಲ್‌, ಫರ್ವೇಝ್‌ ಅವರ ಸಹೋದರ

⁠ಈ ಸಂದರ್ಭದಲ್ಲಿ ಸ್ಟಾರ್ ನವಾಝ್, ಅಬ್ದುಲ್‌ ಸಮದ್, ಫಾರೂಕ್, ಇರ್ಷಾದ್, ಸೌಕತ್, ನೂರುದ್ದೀನ್ ಮನ್ಸೂರ್ , ಫಯಾಝ್, ಸಲೀಮ್, ಅಬ್ದುಲ್ ಮಜೀದ್ ಮಂಗಳಪೇಟೆ ಮೊದಲಾದವರು ಇದ್ದರು.

error: Content is protected !!