ಮಾರಕಾಸ್ತ್ರ ತೋರಿಸಿ ಸರಣಿ ಸರ ಕಳವು : ಆರೋಪಿ ಸೆರೆ

ಬೆಂಗಳೂರು: ಮಹಿಳೆಯರಿಗೆ ಮಾರಕಾಸ್ತ್ರ ತೋರಿಸಿ ಸರಣಿ ಸರ ಕಳವು ಮಾಡಿದ್ದ ಆರೋಪಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 80 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದ್ದು, ಸೆ.13ರಂದು ಒಂದೇ ದಿನದಲ್ಲಿ ವಿವಿಧೆಡೆ 5 ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ರಾಮನಗರ ಮೂಲದ ಪ್ರವೀಣ್‌ (28) ಬಂಧಿತ. ಮತ್ತೊಬ್ಬ ಆರೋಪಿ ಯೋಗಾನಂದ್‌ ಎಂಬಾತನಿಗಾಗಿ ಶೋಧ ನಡೆಸಲಾಗುತ್ತಿದೆ.

ಅಪರಾಧ ಹಿನ್ನೆಲೆ ಯುಳ್ಳ ಯೋಗಾನಂದ್‌, ಈ ಹಿಂದೆ ದರೋಡೆ ಪ್ರಕರಣದಲ್ಲಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದ. ಅದೇ ವೇಳೆ ಪ್ರವೀಣ್‌ ಸಹ ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿ ಅದೇ ಜೈಲಿಗೆ ಹೋಗಿದ್ದ. ಆಗ ಅವರಿಬ್ಬರೂ ಪರಸ್ಪರ ಪರಿಚಯವಾಗಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಆರೋಪಿಗಳು ಸರ ಕಳವು ಕೃತ್ಯಕ್ಕೆ ಇಳಿದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಯೋಗಾನಂದ್‌ ಮತ್ತು ಪ್ರವೀಣ್‌, ಸೆ.13ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಾ ಗಿರಿನಗರ, ಹನುಮಂತ ನಗರ, ಕೋಣನಕುಂಟೆ, ಕೊತ್ತನೂರು, ಇಂದಿರಾನಗರ ಠಾಣೆ ವ್ಯಾಪ್ತಿಯ ವಿವಿಧೆಡೆ ಕೆಲವೇ ತಾಸುಗಳ ಅಂತರದಲ್ಲಿ 5 ಮಹಿಳೆಯರಿಗೆ ಮಾರಕಾಸ್ತ್ರ ತೋರಿಸಿ ಸರಗಳನ್ನು ದೋಚಿದ್ದರು. ಆರೋಪಿಗಳು ಮಹಿಳೆಯರ ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಬೆದರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಶ್ವರಿನಗರದಲ್ಲಿನ ಘಟನಾ ಸ್ಥಳದ ಸಿ.ಸಿ ಕ್ಯಾಮೆರಾದಲ್ಲಿ ಆರೋಪಿಗಳ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ವಿವರ ಸೆರೆಯಾಗಿತ್ತು. ಈ ಸುಳಿವು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಯೋಗಾನಂದ್‌ ತಲೆಮರೆಸಿಕೊಂಡಿದ್ದು, ಶೀಘ್ರವೇ ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಹೊಸಕೆರೆಹಳ್ಳಿ ಬಳಿ ಈಶ್ವರಿನಗರ ದಲ್ಲಿ ವರಲಕ್ಷ್ಮೀ, ಉಷಾ ಎಂಬುವರನ್ನು ಮಾರಕಾಸ್ತ್ರ ಗಳಿಂದ ಬೆದರಿಸಿ 54 ಗ್ರಾಂ ಸರ ದೋಚಿದ್ದರು. ಈ ಮಹಿಳೆಯರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಸ್ಥಳದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾ ನೋಡಲು ಹೋಗಿದ್ದರು. ಆರೋಪಿಗಳು ಮಾರಕಾಸ್ತ್ರದಿಂದ ಬೆದರಿಸಿ ಉಷಾ ಅವರ 9 ಗ್ರಾಂ ಚಿನ್ನದ ಸರ ಕಿತ್ತು ಕೊಂಡಿದ್ದರು. ಬಳಿಕ ವರಲಕ್ಷ್ಮೀ ಸರ ಕಿತ್ತುಕೊಳ್ಳಲು ಯತ್ನಿಸಿದ್ದರು. ಆಗ ಪ್ರತಿರೋಧ ತೋರಿದ್ದರಿಂದ ಆರೋಪಿಗಳು ಅವರ ಬಲಗೈಗೆ ಮಾರಕಾಸ್ತ್ರದಿಂದ ಹೊಡೆದು 45 ಗ್ರಾಂ ಚಿನ್ನದ ಸರ ದೋಚಿದ್ದರು. ವರಲಕ್ಷ್ಮೀ ಅವರ ಬಲಗೈ ಬೆರಳು ತುಂಡಾಗಿತ್ತು

error: Content is protected !!