ಬೆಂಗಳೂರು: ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯನ್ನು ರಹಸ್ಯ ಕ್ಯಾಮೆರಾದಲ್ಲಿ ಚಿತ್ರೀಕರಿಸಿ, ಆ ವಿಡಿಯೋವನ್ನು ಸ್ನೇಹಿತರಿಗೆ ಕಳುಹಿಸುತ್ತಿದ್ದ ಆರೋಪದ ಮೇಲೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆಯ ದೂರಿನ ಪ್ರಕಾರ, ಆರೋಪಿ ಸಯ್ಯದ್ ಇನಾಮುಲ್ ಕಳೆದ ವರ್ಷ (ಸೆಪ್ಟೆಂಬರ್ 2024) ಆಕೆಯೊಂದಿಗೆ ಮದುವೆಯಾದ. ಆದರೆ, ಆತ ಈಗಾಗಲೇ ಮೊದಲೇ ಮತ್ತೊಂದು ಮದುವೆಯಾಗಿದ್ದನ್ನು ಪತ್ನಿಗೆ ತಿಳಿಸಿರಲಿಲ್ಲ. ಇದರಿಂದ ಎರಡನೇ ಮದುವೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದಲ್ಲದೆ, ಆರೋಪಿ ಪತ್ನಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದ ಮಾತ್ರವಲ್ಲದೆ, “ತಾನು 19 ಮಂದಿ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ” ಎಂದು ಹೆಮ್ಮೆಪಟ್ಟು ಹೇಳಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಯ್ಯದ್ ಮನೆಗೆ ರಹಸ್ಯ ಕ್ಯಾಮೆರಾ ಅಳವಡಿಸಿ ಪತ್ನಿಯೊಂದಿಗೆ ನಡೆಸಿದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ, ದುಬೈಯಲ್ಲಿ ವಾಸಿಸುತ್ತಿರುವ ತನ್ನ ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ ಎಂಬ ಗಂಭೀರ ಆರೋಪವೂ ದಾಖಲಾಗಿದೆ. ಜೊತೆಗೆ, ಪತ್ನಿಗೆ ತನ್ನ ಕೆಲವು ವಿದೇಶಿ ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ವಿವಾಹದ ಸಮಯದಲ್ಲಿ ವರದಕ್ಷಿಣೆಯಾಗಿ ಯಮಹಾ ಏರೋಕ್ ಬೈಕ್ ಮತ್ತು 340 ಗ್ರಾಂ ಚಿನ್ನಾಭರಣಗಳು ನೀಡಲಾಗಿದ್ದವು. ಮದುವೆ ಸಂದರ್ಭದಲ್ಲಿ ಆರೋಪಿಯ ದೊಡ್ಡ ತಂಗಿಯ ಗಂಡ ಅಮೀನ್ ಬೇಗ್ (ಆರೋಪಿ–2) ಕ್ಯಾಟರಿಂಗ್ ವಿಳಂಬದ ವಿಚಾರದಲ್ಲಿ ಪಿರ್ಯಾದಿದಾರರ ಕುಟುಂಬಕ್ಕೆ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾನೆಂಬುದೂ ದೂರಿನಲ್ಲಿ ಉಲ್ಲೇಖವಾಗಿದೆ.
2024ರ ಡಿಸೆಂಬರ್ 17ರಂದು ಸಯ್ಯದ್ ತಾನೇ “ನೀನು ನನ್ನ ಎರಡನೇ ಹೆಂಡತಿ, ನನಗೆ ಈಗಾಗಲೇ ಮದುವೆಯಾಗಿದೆ, ಇನ್ನೂ 19 ಮಂದಿ ಮಹಿಳೆಯರೊಂದಿಗೆ ಸಂಬಂಧವಿದೆ” ಎಂದು ತಪ್ಪೊಪ್ಪಿಗೆ ಹೇಳಿದ್ದಾನೆಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಸಂತ್ರಸ್ತೆಯನ್ನು ತನ್ನ ತಂದೆ–ತಾಯಿಯನ್ನು ಭೇಟಿಯಾಗದಂತೆ ತಡೆದು, “ಯಾವುದೇ ದೂರನ್ನು ನೀಡಿದರೆ ವಿಚ್ಛೇದನ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.
ಪ್ರಸ್ತುತ, ಮಹಿಳೆಯ ದೂರು ಆಧರಿಸಿ ಪುಟ್ಟೇನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ಅವನ ಪತ್ತೆಗೆ ಶೋಧ ಕಾರ್ಯ ಜೋರಾಗಿದೆ.