ಬಂಟ್ವಾಳ: ತಾಲೂಕಿನಲ್ಲಿ ಗೋಕಳ್ಳತನ ಮತ್ತು ಗೋಹತ್ಯೆ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗುತ್ತಿದ್ದ ಆರೋಪಿಯ ಮನೆ ಹಾಗೂ ಅಕ್ರಮ ಕಸಾಯಿಖಾನೆಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಅಥವಾ ಅಕ್ರಮ ಕಸಾಯಿಖಾನೆಯನ್ನು ಸರ್ಕಾರದ ವಶಕ್ಕೆ ಪಡೆಯುತ್ತಿರುವುದು ಇದೇ ಮೊದಲ ಬಾರಿಗೆ ನಡೆದಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಪುದು ಗ್ರಾಮದ ಮಾರಿಪಳ್ಳ ಪಾಡಿಯ ಹಸನಬ್ಬ ಗೋಕಳವು, ಹಲವು ಬಾರಿ ಗೋಹತ್ಯೆ ಹಾಗೂ ಗೋಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ.
ಈತನ ವಿರುದ್ಧ 2017 ಮತ್ತು 2018ರಲ್ಲಿ ಸಹ ಗೋಸಂರಕ್ಷಣಾ ಕಾಯಿದೆ ಹಾಗೂ ಗೋಹತ್ಯೆ ನಿಷೇಧ ಕಾಯಿದೆಯ ವಿವಿಧ ಕಲಂಗಳಡಿ ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ ದಸ್ತಗಿರಿ ಕೂಡ ಮಾಡಲಾಗಿದೆ.
ಹಸನಬ್ಬನು ಕಳವು ಮಾಡಿದ ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೆ, ತನ್ನ ಮನೆಯಲ್ಲಿ ಅಕ್ರಮ ಕಸಾಯಿಖಾನೆ ನಿರ್ಮಿಸಿ ಮಾಂಸ ಉತ್ಪಾದನೆ ಮಾಡುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ವರದಿಯ ಆಧಾರದ ಮೇಲೆ, ಸಹಾಯಕ ಆಯುಕ್ತರು ಮತ್ತು ಉಪವಿಭಾಗೀಯ ದಂಡಾಧಿಕಾರಿಗಳು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 8(4) ಮತ್ತು 8(5)ರಡಿ ಕ್ರಮ ಕೈಗೊಂಡಿದ್ದಾರೆ.
ಸೆಪ್ಟೆಂಬರ್ 25ರಂದು ಆರೋಪಿಯ ಮನೆಯಾಗಿರುವ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಸಂಖ್ಯೆ 6-54 ಮತ್ತು 6-54(1)ರ ಮನೆಯನ್ನು/ಅಕ್ರಮ ಕಸಾಯಿಖಾನೆಯನ್ನು ಜಪ್ತಿ ಮಾಡಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.