ಮಧ್ಯಪ್ರದೇಶ: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಇಡೀ ದೇಶವೇ ಬೆಚ್ಚಿಬೀಳಿಸುವಂಥ ಹೃದಯ ವಿದ್ರಾವಕ ದುರಂತ ನಡೆದಿದೆ. ಕಳೆದ 15 ದಿನಗಳಲ್ಲಿ ಆರು ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದು, ಇದಕ್ಕೆ ವಿಷಕಾರಿ ಡೈಥಿಲೀನ್ ಗ್ಲೈಕಾಲ್ ಬೆರೆಸಿದ ಕಲುಷಿತ ಕೆಮ್ಮಿನ ಸಿರಪ್ ಸೇವನೇ ಕಾರಣವಿರಬಹುದೆಂದು ಶಂಕಿಸಲಾಗಿದೆ.

ಐದು ವರ್ಷದೊಳಗಿನ ಮಕ್ಕಳು ಮೊದಲಿಗೆ ಶೀತ–ಜ್ವರದಿಂದ ಬಳಲಿದರು. ಸ್ಥಳೀಯ ವೈದ್ಯರು ಕೆಮ್ಮಿನ ಸಿರಪ್‌ಗಳನ್ನು ನೀಡಿದ ನಂತರ ಲಕ್ಷಣಗಳು ಕಡಿಮೆಯಾದರೂ, ಕೆಲವು ದಿನಗಳಲ್ಲಿ ಮೂತ್ರ ವಿಸರ್ಜನೆ ಕಡಿಮೆಯಾಗುವುದು, ತೀವ್ರ ಸೋಂಕು ಮತ್ತು ಮೂತ್ರಪಿಂಡ ವೈಫಲ್ಯ ಎದುರಾಯಿತು. ಚಿಕಿತ್ಸೆಗಾಗಿ ನಾಗ್ಪುರಕ್ಕೆ ಕರೆದೊಯ್ಯಲಾಗಿದ್ದ ಮೂವರು ಮಕ್ಕಳು ಅಲ್ಲಿ ಮೃತಪಟ್ಟಿದ್ದಾರೆ.
ಬಯಾಪ್ಸಿ ಪರೀಕ್ಷೆಯಲ್ಲಿ ವಿಷಕಾರಿ ಡೈಥಿಲೀನ್ ಗ್ಲೈಕಾಲ್ ಪತ್ತೆಯಾಗಿದ್ದು, ಹೆಚ್ಚಿನ ಬಲಿಪಶುಗಳು Coldrif ಹಾಗೂ Nextro-DS ಸಿರಪ್ ಸೇವಿಸಿದ್ದಾಗಿ ಪೋಷಕರು ತಿಳಿಸಿದ್ದಾರೆ.
ಜಿಲ್ಲಾ ಕಲೆಕ್ಟರ್ ಶೀಲೇಂದ್ರ ಸಿಂಗ್ ಅವರು ಈ ಸಿರಪ್‌ಗಳ ಮಾರಾಟವನ್ನು ತಕ್ಷಣವೇ ನಿಷೇಧಿಸಿ, ತುರ್ತು ಸಲಹೆ ಹೊರಡಿಸಿದ್ದಾರೆ. “ನೀರಿನ ಮಾದರಿಗಳಲ್ಲಿ ಸೋಂಕಿನ ಅಂಶ ಕಾಣದ ಕಾರಣ, ಸಿರಪ್‌ನಿಂದಲೇ ಈ ದುರಂತ ಸಂಭವಿಸಿರುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ICMR ತಂಡ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ಜೊತೆಗೆ ಭೋಪಾಲ್‌ನ ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆ–ಮನೆಗೆ ಸಮೀಕ್ಷೆ ನಡೆಸುತ್ತಿದ್ದಾರೆ.
ಮುಖ್ಯ ವೈದ್ಯಾಧಿಕಾರಿ ಡಾ. ನರೇಶ್ ಗೋನಾರೆ ಅವರ ಪ್ರಕಾರ, ಮೊದಲ ಪ್ರಕರಣ ಆಗಸ್ಟ್ 24ರಂದು ಪತ್ತೆಯಾಗಿದ್ದು, ಮೊದಲ ಸಾವು ಸೆಪ್ಟೆಂಬರ್ 7ರಂದು ನಡೆದಿದೆ. “ಸೆಪ್ಟೆಂಬರ್ 20ರಿಂದ ಮೂತ್ರ ತೊಂದರೆ ಮತ್ತು ಕಿಡ್ನಿ ಸಮಸ್ಯೆಗಳ ಪ್ರಕರಣಗಳು ಹೆಚ್ಚುತ್ತಿವೆ. ಸಾಮಾನ್ಯ ವೈರಲ್ ಸೋಂಕಿಗಿಂತ ಇದು ಹೆಚ್ಚು ಅಪಾಯಕಾರಿ” ಎಂದು ಅವರು ಎಚ್ಚರಿಸಿದ್ದಾರೆ.
ರಕ್ತ ಮತ್ತು ಔಷಧ ಮಾದರಿಗಳನ್ನು ಪುಣೆಯ ವೈರಾಲಜಿ ಸಂಸ್ಥೆಗೆ ಹೆಚ್ಚಿನ ವಿಶ್ಲೇಷಣೆಗೆ ಕಳುಹಿಸಲಾಗಿದೆ.