ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಶೀಘ್ರದಲ್ಲಿ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಸ್‌ಐಟಿ ತನ್ನ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಪತ್ತೆಯಾದ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಈ ಹಿಂದೆ ಪತ್ತೆಯಾದ ಮಾಹಿತಿಗಳ ಕುರಿತು ವರದಿಗಳನ್ನು ಅಂತಿಮಗೊಳಿಸಿ ಕಳುಹಿಸಲು ಕೇಳಲಾಗಿದೆ. ಎಫ್‌ಎಸ್‌ಎಲ್ ವರದಿ ಬಂದ ನಂತರ ಮಾತ್ರ ತನಿಖೆಯ ಮುಕ್ತಾಯ ಸಾಧ್ಯ. ಆದಷ್ಟು ಬೇಗ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ” ಎಂದರು.
ತನಿಖೆಗೆ ಸಂಬಂಧಿಸಿದಂತೆ ಒಂದರ ನಂತರ ಒಂದು ಅರ್ಜಿಗಳನ್ನು ಸಲ್ಲಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದಕ್ಕೆ ಒಂದು ಅಂತ್ಯ ಇರಬೇಕು. ನಾಳೆ ಅಥವಾ ಮರುದಿನವೇ ಮುಗಿಸಿ ಬಿಡಲು ಹೇಳಲು ಸಾಧ್ಯವಿಲ್ಲ. ಅಗತ್ಯ ಮಾಹಿತಿಗಳು, ಸಾಮಗ್ರಿಗಳು ಬಂದ ನಂತರ ತನಿಖೆ ಮುಗಿಯುತ್ತದೆ” ಎಂದರು.
ದೂರುದಾರರು ಹಾಗೂ ಇತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದ ವಿಚಾರವನ್ನು ಎತ್ತಿ ಹಿಡಿದಾಗ, “ಎಸ್‌ಐಟಿ ತನ್ನ ವರದಿಯಲ್ಲಿ ಆ ಅಂಶವನ್ನೂ ಪರಿಗಣಿಸಬಹುದು” ಎಂದು ಸಚಿವರು ಸ್ಪಷ್ಟಪಡಿಸಿದರು.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿರುವ ಕುರಿತು ಕೇಳಿದ ಪ್ರಶ್ನೆಗೆ, “ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದನ್ನು ನೋಡಬೇಕು. ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ” ಎಂದು ಗೃಹ ಸಚಿವರು ತಿಳಿಸಿದರು.