ಬಜಪೆ: ಇಲ್ಲಿನ ಬಜಪೆ ಕೇಂದ್ರ ಮೈದಾನದ ಶ್ರೀ ಶಕ್ತಿ ಮಂಟಪದಲ್ಲಿ 33ನೇ ವರ್ಷದ ಸಾಂಪ್ರದಾಯಿಕ ಶ್ರೀ ಶಾರದೋತ್ಸವವು ಸೆಪ್ಟೆಂಬರ್ 29, ಸೋಮವಾರದಿಂದ ಆರಂಭವಾಗಿ ಅಕ್ಟೋಬರ್ 1, ಬುಧವಾರದವರೆಗೆ ಅನಂತ ಪದ್ಮನಾಭ ಆಚಾರ್ಯ ಶಿಬರೂರು ಅವರ ಪೌರಹಿತ್ಯದಲ್ಲಿ ಶ್ರದ್ಧೆ ಹಾಗೂ ಭಕ್ತಿಯೊಂದಿಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಅವಧಿಯಲ್ಲಿ ವಿದ್ವತ್ ಸಮ್ಮೇಳನ, ಧಾರ್ಮಿಕ ಕಾಯಕ್ರಮಗಳು, ಭಜನೆಗಳು, ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿದೆ. ಶಾರದೋತ್ಸವವು ಅಕ್ಟೋಬರ್ 1ರಂದು ಭವ್ಯ ಸಮಾರೋಪವನ್ನು ಕಾಣಲಿದೆ. ದಿನವಿಡೀ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಭಾವಪೂರ್ಣ ಕಾರ್ಯಕ್ರಮಗಳು ಜರುಗಲಿವೆ.

ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, 1 ಗಂಟೆಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು – ಸಾಂಪ್ರದಾಯಿಕ ಭರತನಾಟ್ಯ ಮತ್ತು ಜನಪದ ವೈವಿಧ್ಯಗಳ ಪ್ರಸ್ತುತಿ ನಡೆಯಲಿದ್ದು, “ನೃತ್ಯಕಲಾಂಜಲಿ” ನೃತ್ಯ ಸಂಸ್ಥೆಯ ಕಲಾವಿದರು ವಿಶೇಷ ಪ್ರದರ್ಶನ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಚೆಂಡೆವಾದನ, 5 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ದಿನದ ಕೊನೆಗೆ, ಸಂಜೆ 5.30ಕ್ಕೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಜರುಗಲಿದ್ದು, ಸಮಾರೋಪಕ್ಕೆ ಭಕ್ತಿಭಾವದ ಸೊಬಗು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.
