ಕಾಸರಗೋಡು: ತಡರಾತ್ರಿ ಕುಂಬ್ಳದ ಆರು ಪಥದ ಹೆದ್ದಾರಿಯ ಮಧ್ಯದಲ್ಲಿ ನಿಂತಿದ್ದ ಗ್ಯಾಸ್ ಟ್ಯಾಂಕರ್ ಮತ್ತು ಅದರೊಳಗೆ ನಿದ್ರಿಸುತ್ತಿದ್ದ ಚಾಲಕನ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದ ಘಟನೆ ನಡೆದಿದೆ.
ಶುಕ್ರವಾರ ತಡರಾತ್ರಿ ಬೆಂಗಳೂರು ನೋಂದಾಯಿತ ಇಂಡೇನ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಅಂಗಸಂಸ್ಥೆ)ಗೆ ಸೇರಿದ ಅಡುಗೆ ಅನಿಲ ಟ್ಯಾಂಕರ್, ಮಂಗಳೂರಿಗೆ ಹಿಂತಿರುಗುವ ವೇಳೆ ಕುಂಬ್ಳದ ಹೆದ್ದಾರಿಯಲ್ಲಿ ಅಚಾನಕ್ ನಿಂತಿತು. ಆ ಸಮಯದಲ್ಲಿ ಟ್ಯಾಂಕರ್‌ನ ಹೆಡ್‌ಲೈಟ್‌ಗಳು ಪೂರ್ಣ ಪ್ರಮಾಣದಲ್ಲಿ ಪಳಪಳ ಹೊಳೆಯುತ್ತಿದ್ದು, ರಿವರ್ಸ್ ಲೈಟ್ ಸಹ ಆನ್ ಆಗಿತ್ತು. ಆದರೆ ಕ್ಯಾಬಿನ್ ಒಳಗೆ ತಮಿಳುನಾಡಿನ ಚಾಲಕ ಬಾಲಸುಬ್ರಮಣಿಯನ್ ಹಾಸಿಗೆಯ ಮೇಲೆ ಗಾಢ ನಿದ್ರೆಯಲ್ಲಿದ್ದ. ಇದನ್ನು ಕಂಡು ಇತರ ವಾಹನ ಸವಾರರು ಬೆಚ್ಚಿಬಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಸಿಟಿವಿ ಕ್ಯಾಮೆರಾಗಳು ಈ ವಿಚಿತ್ರ ದೃಶ್ಯದ ಸೆರೆಹಿಡಿದು ತಕ್ಷಣ ಪೊಲೀಸರಿಗೆ ಎಚ್ಚರಿಕೆಯನ್ನು ಕಳುಹಿಸಿತು. ಕುಂಬ್ಳ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಜೇಶ್ ಅವರ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಚಾಲಕನನ್ನು ಎಚ್ಚರಗೊಳಿಸಿ ವಶಕ್ಕೆ ಪಡೆದು, ಟ್ರಕ್ ಅನ್ನು ಪಕ್ಕಕ್ಕೆ ಸರಿಸಿ ಸಾಧ್ಯವಾಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದರು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಚಾಲಕನು ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದನೆಂಬುದು ಬೆಳಕಿಗೆ ಬಂದಿದೆ. ಅವನಿಗೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವಾಹನವನ್ನು ಅಲ್ಲೇ ನಿಲ್ಲಿಸಿ ನಿದ್ರಿಸಿದ್ದಾನೆ. ಅವನ ವಿರುದ್ಧ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣ ಹಾಗೂ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಶಿಫಾರಸು ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದೇವೇಳೆ, ಲಾರಿ ಮಾಲೀಕರಿಗೂ ಸಮನ್ಸ್ ಜಾರಿ ಮಾಡಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.