ಬಾರ್ ಮಾಲಕ ವಸಿಷ್ಠ ಯಾದವ್ ಕೊಲೆ ಆರೋಪಿಯಾಗಿದ್ದ ಸೈಫುದ್ದೀನ್
ಉಡುಪಿ: ಮುಂಬೈ ಮೂಲದ ಬಾರ್ ಮಾಲೀಕ ವಸಿಷ್ಠ ಯಾದವ್ ಕೊಲೆ ಸೇರಿ 18ಕ್ಕೂ ಅಧಿಕ ಪ್ರಕರಣಗಳ ಆರೋಪಿ, ರೌಡಿಶೀಟರ್, ಎಕೆಎಂಎಸ್ ಟ್ರಾವೆಲ್ಸ್ ಮಾಲೀಕ ಸೈಫ್ ಅಲಿಯಾಸ್ ಸೈಫುದ್ದೀನ್ ಕೊಡವೂರಿನ ತನ್ನ ನಿವಾಸದಲ್ಲಿ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕರಾವಳಿಯಲ್ಲಿ ಪಾತಕ ಲೋಕ ಮತ್ತೆ ವಿಜ್ರಂಭಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸೈಫುದ್ದೀನ್ ಮನೆಯಲ್ಲಿದ್ದಾಗ ಅಟಕಾಯಿಸಿದ ಮೂವರು ದುಷ್ಕರ್ಮಿಗಳು ಚಾಕು, ತಲ್ವಾರ್ ದಾಳಿ ನಡೆಸಿ ಹತ್ಯೆ ನಡೆಸಿದ್ದಾರೆ. ಈ ಕೃತ್ಯವನ್ನು ಆತನ ಬಸ್ಸಿನಲ್ಲಿಯೇ ಚಾಲಕರಾಗಿ ದುಡಿಯುತ್ತಿದ್ದ ಮೂವರು ಆರೋಪಿಗಳು ಮಾಡಿದ್ದಾಗಿ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಬಾರ್ ಮಾಲಕ ವಸಿಷ್ಠ ಯಾದವ್ ಕೊಲೆ ಆರೋಪಿ:
ಸೈಫುದ್ದೀನ್ 2020ರಲ್ಲಿ ಮುಂಬೈ ಮೂಲದ ಬಾರ್ ಮಾಲೀಕ ವಸಿಷ್ಠ ಯಾದವ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ನವಿ ಮುಂಬೈನ ʻಮಾಯಾ ಡೇ ಲೇಡಿಸ್ ಬಾರ್ ಅಂಡ್ ರೆಸ್ಟೋರೆಂಟ್ʼ ಮಾಲೀಕ ವಸಿಷ್ಠ ಯಾದವ್ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬೆಲ್ಲಂಪಳ್ಳಿಯ ದೊಡ್ಡನಗುಡ್ಡೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಾಯಾ ಡೇ ಮಾಜಿ ಉದ್ಯೋಗಿ ಮೂಲತಃ ದಿಲ್ಲಿ ನಿವಾಸಿ ಸುಮಿತ್ ಮಿಶ್ರಾ, ಉಡುಪಿಯ ಎಕೆಎಂಎಸ್ ಬಸ್ ಸಿಬ್ಬಂದಿ ಅಬ್ದುಲ್ ಶಕೂರ್, ಅವಿನಾಶ್ ಕರ್ಕೇರ, ಮಹಮ್ಮದ್ ಶರೀಫ್ ನನ್ನು ಬಂಧಿಸಿದಾಗ ಸೈಫುದ್ದೀನ್ ಕೊಲೆಗೆ ಸಂಚು ರೂಪಿಸಿರುವುದು ಪತ್ತೆಯಾಗಿತ್ತು.
ಪೊಲೀಸರು ಸೈಫುದ್ದೀನ್ ನನ್ನು ಆತ್ರಾಡಿಯಲ್ಲಿರುವ ಮನೆಯಿಂದ ಬಂಧಿಸಿದ್ದರು. ವಸಿಷ್ಠ ಕೊಲೆಯಾಗುವ ಏಳೆಂಟು ತಿಂಗಳ ಹಿಂದೆ ಉಡುಪಿಯ ಎಕೆಎಂಎಸ್ ಗ್ಯಾಂಗ್‍ನ ಸೈಫ್ ಮತ್ತು ಅಕ್ರಮ್ ಪರಿಚಯವಾಗಿ ಉಡುಪಿಗೆ ಬಂದಿದ್ದು, ಚೆನ್ನಾಗಿದ್ದರು. ಆದರೆ ಹಣಕಾಸು ವಿಷಯದಿಂದಾಗಿ ವಸಿಷ್ಠ ಹಾಗೂ ಸೈಫು ಮಧ್ಯೆ ಮನಸ್ತಾಪ ಮೂಡಿತ್ತು. ಹಾಗಾಗಿ ವಸಿಷ್ಠನನ್ನು ಉಪಾಯವಾಗಿ ಕರೆಸಿ ಹಗ್ಗದಿಂದ ಕತ್ತು ಹಿಸುಕಿ, ಅತ್ರಾಡಿ-ಕುಕ್ಕೆಹಳ್ಳಿ ರಸ್ತೆಯ ಬೆಲ್ಲಂಪಳ್ಳಿಯಲ್ಲಿ ಅವರ ಶವವನ್ನು ಎಸೆದಿರುವುದು ತನಿಖೆಯಲ್ಲಿ ಬಯಲಾಗಿತ್ತು.
ಸೈಫ್ ಹತ್ಯಾ ಯತ್ನ!!
ಸೈಫುದ್ದೀನ್ ಜೈಲಿನಿಂದ ಹೊರಬಂದ ಬಳಿಕವೂ ಹತ್ಯೆಗೆ ಯತ್ನ ನಡೆದಿತ್ತು. 2020ರ ನವೆಂಬರ್‌ನಲ್ಲಿ ಮಣಿಪಾಲದ ಲಕ್ಷ್ಮಿಂದ್ರನಗರದಲ್ಲಿರುವ ಕಚೇರಿಗೆ ನಾಲ್ವರು ನುಗ್ಗಿ ಬಸ್ ಮಾಲೀಕ ಸೈಫುದ್ದೀನ್ ಬಗ್ಗೆ ವಿಚಾರಿಸಿ, ಮಹಿಳೆಯನ್ನು ಬೆದರಿಸಿ ಕಾರಿನಲ್ಲಿ ಪರಾರಿಯಾಗಿದ್ದರು. ಇದನ್ನೆಲ್ಲಾ ಹೊರಗಿನಿಂದಲೇ ನಿಂತುಕೊಂಡು ಸೈಫು ಹಾಗೂ ಗೆಳೆಯ ಅಕ್ರಂ ನೋಡಿಕೊಂಡಿದ್ದರು.
ಇದಾದ ಕೆಲವು ದಿನಗಳ ಬಳಿಕ ಸೈಫುದ್ದೀನ್ ಮಣಿಪಾಲದಲ್ಲಿರುವ ತನ್ನ ಕಚೇರಿಯಲ್ಲಿ ತನ್ನ ಮೇಲೆ ನಡೆದ ಕೊಲೆಗೆ ಯತ್ನಿಸಿದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಚಿತ್ರ ಕಲಾವಿದ, ಗುಡ್ಡೆಯಂಗಡಿ ಸಂತೋಷ್ ಪೂಜಾರಿ, ಸೈಫುದ್ದೀನ್ ಬಸ್ ಹಾಗೂ ಇನ್ನಿತರ ವಿಚಾರಕ್ಕೆ ಸಂಬಂಧಿಸಿ ದ್ವೇಷ ಬೆಳೆಸಿಕೊಂಡಿದ್ದರು. 2020ರ ನವೆಂಬರ್ 4 ರಂದು, ಸೈಫುದ್ದೀನ್ ಮತ್ತು ಅಕ್ರಮ್ ಮಧ್ಯಾಹ್ನ 12.15 ರ ಸುಮಾರಿಗೆ ಬ್ಯಾಂಕ್‌ಗೆ ಹೋಗಲು ತಮ್ಮ ಕಚೇರಿಯಿಂದ ಹೊರಡಲು ಮುಂದಾಗಿದ್ದರು. ಆಗ ಟೋಪಿ ಧರಿಸಿದ ಇಬ್ಬರು ವ್ಯಕ್ತಿಗಳು, ಕ್ಯಾಪ್ ಧರಿಸಿದ ಇಬ್ಬರು ವ್ಯಕ್ತಿಗಳು ಸೇರಿದಂತೆ ಒಟ್ಟು ಐದು ಜನರು ಕತ್ತಿಗಳೊಂದಿಗೆ ಕಚೇರಿಗೆ ಪ್ರವೇಶಿಸಿದ್ದು, ಒಬ್ಬಾತ ಸೈಫುದ್ದೀನ್ ಮೇಲೆ ಕತ್ತಿ ಬೀಸಿದರು. ಸೈಫುದ್ದೀನ್ ಕೆಳಗೆ ಬಿದ್ದಾಗ ಕತ್ತಿ ಗೋಡೆಗೆ ಡಿಕ್ಕಿ ಹೊಡೆದಿದೆ. ಆತ ಮತ್ತೊಮ್ಮೆ ಕತ್ತಿ ಬೀಸಿದ್ದು, ಈ ಬಾರಿಯೂ ಸೈಫು ತಪ್ಪಿಸಿಕೊಂಡಿದ್ದು, ಏಟು ಮೇಜಿನ ಮೇಲೆ ಬಡಿದಿತ್ತು. ಸೈಫುದ್ದೀನ್ ಮೇಲೆ ಜನರು ಹಠಾತ್ ದಾಳಿಯಿಂದ ಹೆದರಿದ್ದ ಮ್ಯಾನೇಜರ್ ಹಾಗೂ ಅಕ್ರಮ್ ಕಿರುಚಿಕೊಂಡಾಗ ಪಕ್ಕದ ಹೋಟೆಲ್‌ನವರು ಓಡಿ ಬಂದಿದ್ದರು. ಇದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ- ಮಣಿಪಾಲದಲ್ಲಿ ಸಾರಿಗೆ ಬಸ್ ವ್ಯವಹಾರ ನಡೆಸಿ ಇಡೀ ಸಾಮ್ರಾಜ್ಯವನ್ನೇ ನಡೆಸಿಕೊಂಡು ಬಂದಿದ್ದ ಸೈಫುದ್ದೀನ್ ಮೇಲೆ ಕೊಲೆಗಳು ಮತ್ತು ಕಳ್ಳಸಾಗಣೆ ಪ್ರಕರಣ, ಹಣಕಾಸು ಸೇರಿ ಹಲವು ಪ್ರಕರಣಗಳು ದಾಖಲಾಗಿದೆ. ಉಡುಪಿಯಲ್ಲಿ ಬಸ್ ಸಿಬ್ಬಂದಿಯ ಮಧ್ಯೆ ಯಾವಾಗಲೂ ಜಗಳ ನಡೆಯುತ್ತಿದ್ದು, ಕೆಲವೊಂದು ಗಲಾಟೆಗಳಲ್ಲಿ ಸೈಫುದ್ದೀನ್ ಶಾಮಿಲಾತಿಯೂ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಟೈಮಿಂಗ್ಸ್, ಓವರ್‌ಟೇಕ್ ಇತ್ಯಾದಿ ವಿಚಾರಗಳಲ್ಲಿ ಗಲಾಟೆ ನಡೆಸಿದ ಕುರಿತಂತೆ ಎಕೆಎಂಎಸ್ ಬಸ್ ಸಿಬ್ಬಂದಿಯ ಮೇಲೂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ.
ಇದೇ ವರ್ಷ ಜುಲೈಯಲ್ಲಿ ಹೆಜಮಾಡಿ ಟೋಲ್‌ಗೇಟ್ ದಾಟಿ ರಾ.ಹೆ. 66ರ ಶಿವನಗರ ಕ್ರಾಸ್ ಬಳಿ ಖಾಸಗಿ ಬಸ್ಸನ್ನು ಎಕೆಎಂಎಸ್ ಬಸ್ ಸಿಬ್ಬಂದಿ ತಡೆದಿದ್ದಲ್ಲದೆ, ಇದೇ ವಿಚಾರಕ್ಕೆ ಸಂಬಂಧಿಸಿ ಸೈಫುದ್ದೀನ್ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾಗಿ ಪಡುಬಿದ್ರಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಇದೀಗ ಆತನ ಬಸ್ ಸಿಬ್ಬಂದಿಯೇ ಕೃತ್ಯದಲ್ಲಿ ಶಾಮೀಲಾಗಿರುವುದಾಗಿ ಸುಳಿವು ಲಭಿಸಿದ್ದು ಪ್ರಕರಣ ರೋಚಕ ತಿರುವು ಪಡೆಯುತ್ತಿದೆ.