ಉಪ್ಪಿನಂಗಡಿಯ ನಿವಾಸಿ ದುಬೈಯಲ್ಲಿ ನಿಧನ: ತಾಯ್ನಾಡಿಗೆ ಮೃತದೇಹ ರವಾನೆ

ಉಪ್ಪಿನಂಗಡಿ: ದುಬೈಯಲ್ಲಿ ನಿಧನರಾದ ಉಪ್ಪಿನಂಗಡಿ ಮೂಲದ ವ್ಯಕ್ತಿಯೊಬ್ಬರ ಮೃತದೇಹವನ್ನು ಕೆಸಿಎಫ್ ಯುಎಇ ಮುಖಂಡ, ಸಮಾಜ ಸೇವಕ ಸಮದ್ ಬಿರಾಲಿ ಹಾಗು ಅವರ ತಂಡ ತ್ವರಿತವಾಗಿ ಶುಕ್ರವಾರ(ಸೆ.26) ತಾಯ್ನಾಡಿಗೆ ಕಳುಹಿಸಿದೆ.

ಉಪ್ಪಿನಂಗಡಿ ಸಮೀಪದ ನೀರಬೈಲು ನಿವಾಸಿ ತಿಲಕಾನಂದ ಪೂಜಾರಿ ಅವರು ಇತ್ತೀಚೆಗೆ ದುಬೈನಲ್ಲಿ ನಿಧನರಾಗಿದ್ದರು. ದುಬೈನ ಆಸ್ಪತ್ರೆಯೊಂದರ ಶವಾಗಾರದಲ್ಲಿ ಇಡಲಾಗಿದ್ದ ಅವರ ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಲು ಕಾನೂನಿನ ತೊಡಕುಂಟಾಗಿತ್ತು.

ಈ ವೇಳೆ ಸಾಮಾಜಿಕ ಕಾರ್ಯಕರ್ತ, ಕೆಸಿಎಫ್ ಯುಎಇ ಮುಖಂಡ ಉಚ್ಚಿಲ ಮೂಲದ ಸಮದ್ ಬಿರಾಲಿ ಹಾಗು ಅವರ ತಂಡ, ತ್ವರಿತವಾಗಿ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ದುಬೈ ಪೊಲೀಸ್ ಹಾಗು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ, ಶುಕ್ರವಾರ ಮೃತದೇಹವನ್ನು ಮಂಗಳೂರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮದ್ ಬಿರಾಲಿ ಅವರಿಗೆ ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್(ಬಿಸಿಸಿಐ) ಅಧ್ಯಕ್ಷ ಹಿದಾಯತ್ ಅಡ್ಡೂರು, ಹಕೀಂ ತುರ್ಕಳಿಕೆ ಅವರು ಸಹಕಾರ ನೀಡಿದ್ದು, ಮೃತ ತಿಲಕಾನಂದ ಪೂಜಾರಿ ಅವರ ಎಲ್ಲ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಮೃತದೇಹವನ್ನು ತಾಯ್ನಾಡಿಗೆ ರವಾನಿಸಿದ್ದಾರೆ.

ತ್ವರಿತವಾಗಿ ಮೃತದೇಹವನ್ನು ತಾಯ್ನಾಡಿಗೆ ಸಾಗಿಸುವಲ್ಲಿ ಸಮದ್ ಬಿರಾಲಿ ಅವರ ಶ್ರಮ, ಮಾನವೀಯ ಕಳಕಳಿಯನ್ನು ಯುಎಇಯ ಹಲವು ಸಂಘಟನೆಯವರು, ಸರ್ವ ಧರ್ಮದ ನಾಯಕರು ಶ್ಲಾಘಿಸಿದ್ದಾರೆ.

error: Content is protected !!