ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅರುಣಾಚಲ ಪ್ರದೇಶದ ಪಾಪುಮ್ ಪಾರೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರನ್ನು ಉಪ ಆಯುಕ್ತೆ ವಿಶಾಖಾ ಯಾದವ್ (IAS) ಆತ್ಮೀಯವಾಗಿ ಸ್ವಾಗತಿಸಿದರು. ಈ ಕ್ಷಣದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಯಾದವ್ ಅವರ ಸಾಧನೆಗಳ ಬಗ್ಗೆ ಜನರು ಹೆಚ್ಚಿನ ಮಾಹಿತಿ ಅರಿಯಲು ಪ್ರಾರಂಭಿಸಿದ್ದಾರೆ.
ಐಟಿ ಉದ್ಯೋಗದಿಂದ ಐಎಎಸ್ ವರೆಗೆ…
ವಿಶಾಖಾ ಯಾದವ್ ದೆಹಲಿಯ ನಿವಾಸಿ. ಅವರು **ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (DTU)ನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿ, ಬೆಂಗಳೂರಿನ ಸಿಸ್ಕೋ (Cisco) ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉತ್ತಮ ಸಂಬಳದ ಉದ್ಯೋಗವಿದ್ದರೂ, ನಾಗರಿಕ ಸೇವೆಯಲ್ಲಿ ಕೆಲಸ ಮಾಡುವ ಕನಸು ಅವರನ್ನು UPSC ತಯಾರಿಯತ್ತ ಎಳೆಯಿತು.
ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಸ್ವಯಂ ಅಭ್ಯಾಸದ ಮೂಲಕ ಅವರು UPSC ಪರೀಕ್ಷೆ ಬರೆಯಲು ಮುಂದಾದರು. ಮೊದಲ ಎರಡು ಪ್ರಯತ್ನಗಳಲ್ಲಿ ಯಶಸ್ವಿಯಾಗದಿದ್ದರೂ, ಮೂರನೇ ಪ್ರಯತ್ನದಲ್ಲಿ 2019ರಲ್ಲಿ ಅಖಿಲ ಭಾರತ 6ನೇ ರ್ಯಾಂಕ್ ಪಡೆದರು.
UPSC ಪರೀಕ್ಷೆಯಲ್ಲಿ 2,025 ಅಂಕಗಳಲ್ಲಿ 1,046 ಅಂಕಗಳನ್ನು ಪಡೆದು ಅಖಿಲ ಭಾರತದಲ್ಲಿಯೇ ಆರನೇ ರ್ಯಂಕ್ ಹೋಲ್ಡರ್. ವಿಶೇಷವೆಂದರೆ ಇವರು ಹೆಚ್ಚಿನ ಸಂಬಳದ ಉದ್ಯೋಗ ಬಿಟ್ಟು, UPSC ತಯಾರಿ ಮಾಡಿ ಈಗ ಅಧಿಕಾರಿಯಾಗಿದ್ದಾರೆ.
1994ರಲ್ಲಿ ದೆಹಲಿಯಲ್ಲಿ ಜನಿಸಿದ ವಿಶಾಖಾ ಅವರ ತಂದೆ ರಾಜ್‌ಕುಮಾರ್ ಯಾದವ್ ದೆಹಲಿ ಪೊಲೀಸರಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಕುಟುಂಬದ ಪ್ರೋತ್ಸಾಹದಿಂದಲೇ ಅವರು ತಮ್ಮ ಕನಸನ್ನು ನನಸಾಗಿಸಿಕೊಂಡರು.
ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಶಾಖಾ ಯಾದವ್, “ಪಾಪುಮ್ ಪಾರೆಯಲ್ಲಿ ಪ್ರಧಾನಿಯನ್ನು ಆತ್ಮೀಯವಾಗಿ ಸ್ವಾಗತಿಸಲು ಅವಕಾಶ ಸಿಕ್ಕಿದ್ದು ನನಗೆ ದೊಡ್ಡ ಹೆಮ್ಮೆ” ಎಂದು ಬರೆದಿದ್ದಾರೆ.