ಉಡುಪಿ: ಕಾಮತ್ ಪೆಟ್ರೋಲ್ ಪಂಪ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿಪ್ಪರ್ ಲಾರಿಯೊಂದು ನಿಂತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು, ಬಳಿಕ ಪಾದಚಾರಿಯೊಬ್ಬರಿಗೆ ಗುದ್ದಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ(ಸೆ.25) ರಂದು ಸಂಭವಿಸಿದೆ.
ಬಿಹಾರ ಮೂಲದ ರಾಜಕುಮಾರ್ ಶರ್ಮಾ (23) ಮೃತ ವ್ಯಕ್ತಿ.
ರಾಜಕುಮಾರ್ ಶರ್ಮಾ ಎರ್ಮಾಳ್‌ನಲ್ಲಿರುವ ಪ್ಲೈವುಡ್ ಕಾರ್ಖಾನೆಯಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಪಘಾತ ಸಂಭವಿಸುವಾಗ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಪಡುಬಿದ್ರಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಉಡುಪಿಯಿಂದ ಪಡುಬಿದ್ರಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ನಿಂತಿದ್ದ ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ನಂತರ, ಟಿಪ್ಪರ್ ಲಾರಿಯು ಪಡುಬಿದ್ರಿ ಕೃಷಿ ಸಹಕಾರಿ ಸಂಘದ ಹಳೆಯ ಗೋದಾಮಿನ ಗೋಡೆಗೆ ಅಪ್ಪಳಿಸಿದ್ದು, ಕಟ್ಟಡಕ್ಕೆ ಹಾನಿ ಉಂಟಾಗಿ ಸಹಕಾರಿ ಸಂಘಕ್ಕೂ ನಷ್ಟವಾಗಿದೆ.
ಟಿಪ್ಪರ್ ಚಾಲಕನ ನಿರ್ಲಕ್ಷ್ಯದ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಜಕುಮಾರ್ ಶರ್ಮಾ ಅವರನ್ನು ತಕ್ಷಣವೇ ಮುಕ್ಕಾದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.