ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದರೆ ಅವರ ಕಾರ್ಯದಕ್ಷತೆ ಹೆಚ್ಚುತ್ತದೆ. ಇದರಿಂದ ಸಾರ್ವಜನಿಕರು ಸಂಕಷ್ಟಕ್ಕೊಳಗಾದಾಗ ಅತಿ ಕಡಿಮೆ ಸಮಯದಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯ ಬಲ ಹೆಚ್ಚಿಸಲು ವಾಹನಗಳ ಅವಶ್ಯಕತೆ ಇದೆ ಎಂದಾಗ ಎಸ್‌ಸಿಡಿಸಿಸಿ ಬ್ಯಾಂಕ್ ನಮಗೆ ಶೀಘ್ರವಾಗಿ ಎರಡು ಸ್ಕಾರ್ಪಿಯೋ ವಾಹನಗಳನ್ನು ಒದಗಿಸಿದೆ ಇದಕ್ಕಾಗಿ ನಾನು ಪೊಲೀಸ್ ಇಲಾಖೆಯ ವತಿಯಿಂದ ಧನ್ಯವಾದ ಸಲ್ಲಿಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.(SCDCC) ವತಿಯಿಂದ ಕೊಡಿಯಾಲ್‌ಬೈಲ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಮಂಗಳೂರು ನಗರ ಪೊಲೀಸ್ ಇಲಾಖೆಗೆ ಎರಡು ಸ್ಕಾರ್ಪಿಯೋ ವಾಹನಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿತಿಯಾಗಿ ಮಾತನಾಡಿದರು.
ಪೊಲೀಸ್ ಇಲಾಖೆಗೆ ವಾಹನಗಳ ಅವಶ್ಯಕತೆಯ ಬಗ್ಗೆ ತಮ್ಮ ವೃತ್ತಿ ಜೀವನದಲ್ಲಿ ಆದ ಅನುಭವದ ಕುರಿತಂತೆ ವಿವರಿಸಿದ ಕಮೀಷನರ್ ಸುಧೀರ್ ರೆಡ್ಡಿ, ಡ್ರಗ್ ಪೆಡ್ಲರ್ ಹಿಡಿಯಲು ಹೋದಾಗ ಅವನ ವಾಹನ ನಮ್ಮ ವಾಹನಕ್ಕಿಂತಲೂ 120 ಕಿ.ಮೀ. ವೇಗದಲ್ಲಿ ಸಾಗುತ್ತಿತ್ತು. ಆಗಲೇ ನಾನು ಇಲಾಖೆಗೆ ದಕ್ಷ ವಾಹನಗಳ ಅವಶ್ಯಕತೆ ಇದೆ ಎನ್ನುವುದನ್ನು ಮನಗಂಡಿದ್ದೆ. ನಮ್ಮಲ್ಲಿ ಈಗಾಗಲೇ 21 ಹೊಯ್ಸಳ ವಾಹನಗಳಿವೆ. ನಮಗೆ 112ಕ್ಕೆ ಕರೆ ಬಂದಾಗ ಸಾರ್ವಜನಿಕರಿಗೆ ಶೀಘ್ರವಾಗಿ ಪ್ರತಿಕಿಯಿಸಲು ವಾಹನಗಳು ಅಗತ್ಯ. ನಮ್ಮ ಅವಶ್ಯಕತೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಪೂರೈಸಿದೆ ಎಂದು ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದರು.
ಮತ್ತೋರ್ವರು ಮುಖ್ಯ ಅತಿಥಿಯಾಗಿದ್ದ ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು ಮಾತನಾಡಿ, ದೇಶದಲ್ಲಿ 250ಕ್ಕೂ ಅಧಿಕ ಸಹಕಾರಿ ಬ್ಯಾಂಕ್‌ಗಳಿವೆ. ಈ ಪೈಕಿ ಎಸ್‌ಸಿಡಿಸಿ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಇಷ್ಟೊಂದು ಉದ್ಯೋಗಿಗಳ ಸಂಖ್ಯೆ ಬೇರೆ ಯಾವ ಸಹಕಾರಿಯಲ್ಲೂ ಇಲ್ಲ. ಕರ್ನಾಟಕದಲ್ಲಿ ಸಹಕಾರಿ ಬ್ಯಾಂಕ್‌ಗಳು ಚೆನ್ನಾಗಿ ನಡೆಯುತ್ತಿದ್ದು, ಅದರಲ್ಲಿ ಎಸ್‌ಸಿಡಿಸಿ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಮುತುವರ್ಜಿಯೇ ಕಾರಣ. ಸಹಕಾರಿ ಬ್ಯಾಂಕ್ ಒಂದು ಪೊಲೀಸ್ ಇಲಾಖೆಗೆ ವಾಹನಗಳನ್ನು ಕೊಡುಗೆಯಾಗಿ ಸಲ್ಲಿಸಿರುವುದನ್ನು ಕಂಡಿರುವುದು ಇದೇ ಮೊದಲು ಎಂದರು.
ಇತರ ಸಹಕಾರಿಗಳಿಗೂ ಮಾದರಿಯಾಗಲಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಸಹಕಾರಿ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇದೇ ರೀತಿ ಇತರ ಸಹಕಾರಿ ಬ್ಯಾಂಕ್‌ಗಳು ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕೆಂದು ವಿನಂತಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್‌ಗಳ ತವರು. ವಿಜಯ, ಸಿಂಡಿಕೇಟ್, ಕ್ಯಾನರಾ ಬ್ಯಾಂಕ್ ನಮ್ಮ ಜಿಲ್ಲೆಯಲ್ಲಿ ಹುಟ್ಟಿಕೊಂಡರೂ ಅವುಗಳ ಬೋರ್ಡ್ ಈಗ ಕಾಣಿಸ್ತಾ ಇಲ್ಲ ಎಂದು ಬೇಸರಿಸಿದರು. ನಮ್ಮ ಸಹಕಾರಿ ಬ್ಯಾಂಕ್ ಜನರೊಂದಿಗೆ ಬೆರೆತು ಜನರ ಬ್ಯಾಂಕ್ ಆಗಿ ಕೆಲಸ ಮಾಡ್ತಾ ಇದೆ. ಮಹಿಳೆಯರ ಸ್ವಾವಲಂಬನೆಗೆ ಒತ್ತು ಕೊಡುತ್ತೇವೆ. ನಮ್ಮ ಬ್ಯಾಂಕ್‌ನ ಸ್ವಸಹಾಯ ಸಂಘದ 25 ನೇ ಸಮಾರಂಭಕ್ಕೆ ಪೊಲೀಸ್ ಇಲಾಖೆ ಕೊಟ್ಟಿರುವ ಸಹಕಾರ ಎಂದಿಗೂ ಮರೆಯಲಾರೆ. ಅದಕ್ಕಾಗಿ ಧನ್ಯವಾದ ಹೇಳ್ತಾ ಇದ್ದೇನೆ. ದೇಶದ ಭದ್ರತೆಯನ್ನು ಸೈನಿಕರು ನೋಡಿಕೊಂಡರೆ, ರಾಜ್ಯದ ಭದ್ರತೆಯನ್ನು ಪೊಲೀಸರು ಮಾಡುತ್ತಾರೆ. ಪೊಲೀಸರಿಗೆ ಸಮಯವೇ ಇರುವುದಿಲ್ಲ. ಹಾಗಾಗಿ ನಾವೂ ಕೂಡಾ ಜವಾಬ್ದಾರಿ ವಹಿಸಬೇಕು. ಇಲಾಖೆ ವಾಹನಗಳನ್ನು ಕೇಳಿದಾಗ ಎರಡು ಸ್ಕಾರ್ಪಿಯೋ ವಾಹನಗಳನ್ನು ಹಸ್ತಾಂತರಿಸಿದ್ದೇವೆ. ಇಲಾಖೆಯ ಜೊತೆ ಮುಂದೆಯೂ ಇರುತ್ತೇವೆ. ಈ ಕಾರ್ಯ ಇತರ ಸಹಕಾರಿಗಳಿಗೂ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕಮೀಷನರ್ ಸುಧೀರ್ ರೆಡ್ಡಿ ಹಾಗೂ ಸುರೇಂದ್ರ ಬಾಬು ಅವರನ್ನು ಡಾ. ರಾಜೇಂದ್ರ ಕುಮಾರ್ ಸನ್ಮಾನಿಸಿದರು. ಬೆಳಪು ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಡಿಸಿಪಿಗಳಾದ ಮಿಥುನ್, ರವಿಶಂಕರ್, ಉಮೇಶ್, ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಪ್ರಭಾರ) ಗೋಪಾಲಕೃಷ್ಣ ಭಟ್, ಬ್ಯಾಂಕಿನ ನಿರ್ದೇಶಕರು, ಪೊಲೀಸ್ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಅಂತಿಮವಾಗಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಕಮೀಷನರ್ ಸುಧೀರ್‌ರೆಡ್ಡಿ ಅವರಿಗೆ ಕೀಗಳನ್ನು ನೀಡುವ ಮೂಲಕ ಸ್ಕಾರ್ಪಿಯೋ ವಾಹನಗಳನ್ನು ಹಸ್ತಾಂತರಿಸಿದರು.