ಬೆಂಗಳೂರು: ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಸಾಫ್ಟ್ವೇರ್ ಎಂಜಿನಿಯರ್‌ನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಸಾಯಿಬಾಬು (37) ಬಂಧಿತ ಆರೋಪಿ.
ಈತ ಸೆ.16ರಂದು ವೈಟ್ ಫೀಲ್ಡ್‌ನ ಕೋ-ಲಿವಿಂಗ್ ಪಿಜಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಗೆ ಚಾಕುವಿನಿಂದ ಇರಿದು ಹಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಆರೋಪಿ ಕೌಟುಂಬಿಕ ವಿಚಾರಕ್ಕೆ ಪತ್ನಿ ಮತ್ತು ಮಕ್ಕಳನ್ನು ತೊರೆದು 8 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ವೈಟ್‌ಫೀಲ್ಡ್‌ನಲ್ಲಿರುವ ಕೋ-ಲಿವಿಂಗ್ ಪಿಜಿಯಲ್ಲಿ ವಾಸವಾಗಿದ್ದ. ನಗರದ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅದೇ ಪಿಜಿಯ ಮತ್ತೊಂದು ಬ್ಲಾಕ್‌ನ ಕೋಣೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿ ವಾಸವಾಗಿದ್ದು, ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಒಂದೇ ಪಿಜಿಯಾಗಿದ್ದರಿಂದ ಕಳೆದ 3 ತಿಂಗಳಿಂದ ಯುವತಿ ಆರೋಪಿಗೆ ಪರಿಚಿತವಾಗಿದ್ದಾರೆ.
ಅದನ್ನೇ ದುರುಪಯೋಗ ಪಡಿಸಿಕೊಂಡ ಆರೋಪಿ ಸಾಯಿಬಾಬು, ಸೆ.16ರಂದು ಮುಂಜಾನೆ ಯುವತಿ ಕೋಣೆಗೆ ಬಂದು 70 ಸಾವಿರ ರೂ. ಕೇಳಿದ್ದಾನೆ. ಆಕೆ, ಸದ್ಯಕ್ಕೆ ನನ್ನ ಬಳಿ ಹಣವಿಲ್ಲ. ಒಂದೆರಡು ದಿನಗಳಲ್ಲಿ ಕೊಡುತ್ತೇನೆ ಎಂದು ತಿಳಿಸಿದಿದ್ದಾರೆ. ಆಗ ಆರೋಪಿ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಆಕೆಯನ್ನು ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದ್ದಾಳೆ. ಅದರಿಂದ ಕೋಪಗೊಂಡ ಆರೋಪಿ ತಾನು ತಂದಿದ್ದ ಚಾಕುವಿನಿಂದ ಯುವತಿ ಬೆನ್ನಿಗೆ ಇರಿದು ಗಾಯಗೊಳಿಸಿದ್ದಾನೆ. ಅಲ್ಲದೆ, ಆಕೆಯ ಖಾಸಗಿ ಫೋಟೋ ಕ್ಲಿಕ್ಕಿಸಿಕೊಂಡು ಮತ್ತೆ 70 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಆದರೆ ಅಷ್ಟು ಹಣ ಇಲ್ಲ ಎಂದಾಗ, ಆಕೆಯ ಮೊಬೈಲ್ ಕಸಿದುಕೊಂಡು 14 ಸಾವಿರ ರೂ. ಅನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಬಳಿಕ ತನ್ನ ಸ್ನೇಹಿತೆಗೆ ಕರೆ ಮಾಡಿದ್ದ ಯುವತಿ, ಆಕೆಯ ನೆರವಿನೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯಿಂದ ಬಂದ ವರದಿ ಆಧರಿಸಿ ಪೊಲೀಸರು ಯುವತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.