ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಬ್ಯಾಗ್ ಪತ್ತೆಯಾಗಿದೆ. ಇದರಲ್ಲಿ 6.54 ಕೆಜಿ ಚಿನ್ನ ಹಾಗೂ 41.04 ಲಕ್ಷ ರೂಪಾಯಿ ನಗದು ದೊರೆತಿದೆ.
ಸೆ.16 ರಂದು ಸಂಜೆ ಮೂವರು ದರೋಡೆಕೋರರು ಬ್ಯಾಂಕ್‌ನ ಆರು ಜನ ಸಿಬ್ಬಂದಿ ಹಾಗೂ ನಾಲ್ವರು ಗ್ರಾಹಕರಿಗೆ ಪಿಸ್ತೂಲ್, ಚಾಕುಗಳ ತೋರಿಸಿ, ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದರು. ಬ್ಯಾಂಕ್‌ನಲ್ಲಿದ್ದ 1.04 ಕೋಟಿ ರೂ. ಮತ್ತು 20 ಕೆಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಂಟು ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು.
ಅಂದು ರಾತ್ರಿಯೇ ಕದ್ದ ಚಿನ್ನ ಹಾಗೂ ಹಣದೊಂದಿಗೆ ಕಾರಿನಲ್ಲಿ ಆರೋಪಿಗಳು ಮಹಾರಾಷ್ಟ್ರದ ಪಂಢರಾಪುರದತ್ತ ಹೋಗುತ್ತಿದ್ದಾಗ ಸೋಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದ ಬಳಿ ಕಾರು ಅಪಘಾತಕ್ಕೆ ಈಡಾಗಿತ್ತು. ಇದರಿಂದ ಕಾರನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಓಡಿ ಹೋಗಿದ್ದರು. ಅಲ್ಲದೇ, ಈ ಕಾರಿನಲ್ಲಿ ಸ್ವಲ್ಪ ಹಣ ಹಾಗೂ ಚಿನ್ನಾಭರಣ ಸಹ ದೊರೆತಿತ್ತು.
ಹೀಗಾಗಿ ಆರೋಪಿಗಳ ಪತ್ತೆಗೆ ಮಹಾರಾಷ್ಟ್ರ ಪೊಲೀಸರೊಂದಿಗೆ ರಾಜ್ಯ ತನಿಖಾ ತಂಡಗಳು ಜಂಟಿ ಕಾರ್ಯಾಚರಣೆ ಕೈಗೊಂಡಿವೆ. ಇದೀಗ ಅದೇ ಹುಲಜಂತಿ ಗ್ರಾಮದಲ್ಲಿ ಗುರುವಾರ ಸಂಜೆ ಬ್ಯಾಗ್‌ವೊಂದು ಪತ್ತೆಯಾಗಿದೆ. ಈ ಕುರಿತು ಶುಕ್ರವಾರ ಚಡಚಣ ಪೊಲೀಸ್ ಠಾಣೆಯಲ್ಲಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಬ್ಯಾಂಕ್ ದರೋಡೆ ನಡೆದ ಒಂದೂವರೆ ಗಂಟೆಯಲ್ಲೇ ಹುಲಜಂತಿ ಗ್ರಾಮದಲ್ಲಿ ಆರೋಪಿಗಳು ಬಳಕೆ ಮಾಡಿದ್ದ ಕಾರು ಪತ್ತೆ ಹಚ್ಚಲಾಗಿತ್ತು. ಅಂದು ಕಾರಿನಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದಾಗ ಅಪಘಾತವಾಗಿ ಗ್ರಾಮಸ್ಥರೊಂದಿಗೆ ವಾಗ್ವಾದ ಮಾಡಲಾಗಿತ್ತು. ನಂತರದಲ್ಲಿ ಗ್ರಾಮಸ್ಥರಿಗೂ ಬೆದರಿಕೆ ಹಾಕಿ ಅಲ್ಲಿಂದ ಆರೋಪಿಗಳು ಪರಾರಿಯಾದ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ತನಿಖೆ ಕೈಗೊಂಡಾಗ ಕಾರಿನಲ್ಲಿ 21 ಚಿನ್ನದ ಪ್ಯಾಕೇಟ್‌ಗಳು ಹಾಗೂ 1.03 ಲಕ್ಷ ರೂ. ನಗದು ಪತ್ತೆಯಾಗಿತ್ತು ಎಂದು ತಿಳಿಸಿದರು.
ಆ ದಿನದಿಂದಲೇ ಸೋಲಾಪುರ ಹಾಗೂ ವಿಜಯಪುರ ಪೊಲೀಸರು ಇಡೀ ಹುಲಜಂತಿ ಗ್ರಾಮವನ್ನು ಸುತ್ತುವರಿದು, ನಿಗಾ ವಹಿಸಲಾಗಿತ್ತು. ವಾಹನಗಳ ತಪಾಸಣೆ ಸೇರಿದಂತೆ ಅಗತ್ಯ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ, ಗ್ರಾಮದ ಪಾಳು ಬಿದ್ದ ಮನೆಯ ಮೇಲೆ ಬ್ಯಾಗ್ ಪತ್ತೆ ದೊರೆತಿದೆ. ಇದು ಬ್ಯಾಂಕ್‌ನಲ್ಲಿ ಕದ್ದ ಚಿನ್ನ, ಹಣ ತುಂಬಿಕೊಂಡು ಹೋದ ಬ್ಯಾಗ್ ಆಗಿದ್ದು, ಇದರಲ್ಲಿ 41.04 ಲಕ್ಷ ರೂ. ನಗದು ಹಾಗೂ 136 ಪಾಕೇಟ್‌ಗಳಲ್ಲಿ 6.54 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಎಸ್‌ಪಿ ವಿವರಿಸಿದರು.
ಬ್ಯಾಂಕ್ ದರೋಡೆಕೋರರು ಕೃತ್ಯಕ್ಕೆ ಬಳಸಿದ ವಾಹನ ಸಹ ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಸೋಲಾಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಹಾಗೂ ಕಾರು ಕಳ್ಳತನ ಮಾಡಿರುವ ಆರೋಪಿಗಳೇ ಈ ಬ್ಯಾಂಕ್ ದರೋಡೆ ಸಹ ಮಾಡಿದ್ದಾರೆ. ಸೋಲಾಪುರ ಪೊಲೀಸ್ ತನಿಖಾ ತಂಡ ಹಾಗೂ ನಮ್ಮ ತನಿಖಾ ತಂಡ ಜಂಟಿಯಾಗಿ ಆದಷ್ಟು ಬೇಗ ಉಳಿದ ವಸ್ತುಗಳು ಹಾಗೂ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದರು.