ಮಂಗಳೂರು : ಸಾಮಾಜಿಕ, ಶೈಕ್ಷಣಿಕ ಹಾಗೂ ಜಾತಿ ಜನಗಣತಿ ಸಮೀಕ್ಷೆಗೆ ಮನೆಗೆ ಬರುವ ಆಶಾ ಕಾರ್ಯಕರ್ತರು, ಶಿಕ್ಷಕರು ಜಾತಿ ಪಂಗಡಗಳನ್ನು ಕೇಳುವಾಗ ಕಾಲಂ ಸಂಖ್ಯೆ 9 ರಲ್ಲಿ ʻತೀಯಾʼ ಎಂದೇ ನಮೂದಿಸಬೇಕು ಹಾಗೂ ಮಾತೃಭಾಷೆ ಕಾಲಂನಲ್ಲಿ ʻಮಲಯಾಳಂʼ ಎಂದು ನಮೂದಿಸುವಂತೆ ಭಾರತೀಯ ತಿಯಾ ಸಮಾಜ(ರಿ.)ದ ಕೇಂದ್ರ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ್ ತಮ್ಮ ಸಮುದಾಯದವರಲ್ಲಿ ವಿನಂತಿಸಿದ್ದಾರೆ.
ಕುದ್ರೋಳಿ ಭಗವತೀ ಕ್ಷೇತ್ರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಸರಕಾರದಿಂದ ಸೆಪ್ಟೆಂಬರ್ 22ರಿಂದ ಬರುವ ಅಕ್ಟೋಬರ್ 7ರ ತನಕ ಜಾತಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯ ವೇಳೆ ಅಧಿಕಾರಿಗಳು ನಾವು ಹೇಳಿದ ಜಾತಿಯನ್ನು ನಮೂದಿಸಿದ್ದಾರೆಯೇ ಎಂದು ಖಚಿತ ಪಡಿಸಬೇಕು. ಅರ್ಜಿ ನಮೂನೆಯಲ್ಲಿ ಟಿಕ್ ಹಾಕಿರುವ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ಅವರು ತಿಳಿಸಿದರು.
ಈ ಹಿಂದೆ ಆದ ತಪ್ಪು ಮರುಕಳಿಸುವುದು ಬೇಡ, ಹೀಗಾದರೆ ನಾವು ಸರ್ಕಾರದ ಮೂಲ ಸೌಕರ್ಯದಿಂದ ವಂಚಿತರಾಗಬಹುದು. ತೀಯಾ ಸಮಾಜದ ಜನ ಸಂಖ್ಯೆ ಎಷ್ಟಿದೆ ಎಂಬುವುದನ್ನು ಸರಕಾರದ ಗಮನಕ್ಕೆ ತಂದರೆ ಸರಕಾರದ ಸವಲತ್ತುಗಳನ್ನು ಪಡೆಯಲು ಅವಕಾಶವಾಗುತ್ತದೆ. ಇತರ ಸಮುದಾಯಕ್ಕೆ ಸಿಗುವ ಸೌಲಭ್ಯಗಳನ್ನು ತೀಯಾ ಸಮಾಜದವರೂ ಪಡೆಯಲು ರಾಜ್ಯಮಟ್ಟದಲ್ಲಿ ಪ್ರಯತ್ನಿಸೋಣ. ಈ ವಿಷಯವನ್ನು ತೀಯಾ ಸಮಾಜದವರಿಗೆ ತಿಳಿಸಲು ಎಲ್ಲಾ ಸಂಘದ ಮುಖ್ಯಸ್ಥರನ್ನು ಕರೆದು ಸೂಚಿಸಿದ್ದೇವೆ. ಮಂದಿನ ದಿನಗಳಲ್ಲಿ ಮನೆ ಮನೆಗೆ ಬರುವ ಆಶಾಕಾರ್ಯಕರ್ತರಿಗೂ ಇದನ್ನು ತಿಳಿಸಬೇಕು ಎಂದು ಸದಾಶಿವ್ ಉಳ್ಳಾಲ್ ತಿಳಿಸಿದ್ದಾರೆ.
ಬೆಳ್ಚಡ- ಮಮಲಯಾಳಿ ಬಿಲ್ಲವ ಉಪಜಾತಿಯಲ್ಲಿ ಬೇಕಾದ್ರೆ ಸೇರಿಸಿ
ಬೆಳ್ಚಡ, ಮಲಯಾಳಿ ಬಿಲ್ಲವ ಅಂತ ಉಪಜಾತಿಯಲ್ಲಿ ಬೇಕಾದರೆ ಸೇರಿಸಬಹುದು. ಆದರೆ ಜಾತಿ ಕಾಲಂನಲ್ಲಿ ಮಾತ್ರ ತೀಯಾ ಅಂತನೇ ನಮೂದಿಸಿ. ಕಳೆದ ಬಾರಿಯ ಜನಗಣತಿಯಲ್ಲಿ ತೀಯಾ ಸಮುದಾಯದವರ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಆದರೆ ಈ ಬಾರಿ ಅಂತಹ ತಪ್ಪುಗಳು ನಡೆಯದಂತೆ ಜಾತಿ ಬಾಂಧವರು ಎಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ತೀಯಾ ಸಮುದಾಯದವರಿದ್ದಾರೆ. ಕೇರಳದಲ್ಲಿ ಇದಕ್ಕಿಂತಲೂ ಹೆಚ್ಚಿದ್ದು, ಕರ್ನಾಕಟದ ಬೆಂಗಳೂರು, ಶಿವಮೊಗ್ಗ, ಮಡಿಕೇರಿ ದಕ್ಷಿಣ ಕನ್ನಡದ ಉಳ್ಳಾದಲ್ಲಿ ತೀಯಾ ಸಮುದಾಯದವರ ಜನಸಂಖ್ಯೆ ಹೆಚ್ಚಿದೆ. ತೀಯಾ ಸಮಾಜ ಬಾಂಧವರನ್ನು ಸರಕಾರ ತನ್ನ ಗಣನೆಗೆ ಬರಬೇಕಾದರೆ ಜಾತಿಗಣತಿ ನಡೆಯುವಾಗ ಎಲ್ಲರು ಸಹಕರಿಸುವಂತೆ ಅವರು ಮನವಿ ಮಾಡಿದರು.
ಮಲಯಾಳಿ ಬಿಲ್ಲವ ಬೇರೆ- ತುಳುಬಿಲ್ಲವ ಬೇರೆ
ಮಲಯಾಳಿ ಬಿಲ್ಲವ ಹಾಗೂ ತುಳು ಬಿಲ್ಲವರನ್ನು ಒಂದೇ ಜಾತಿ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಎರಡೂ ಜಾತಿಗಳು ಬೇರೆ ಬೇರೆ. ತುಳು ಬಿಲ್ಲವರು ʻಪೂಜಾರಿʼಗಳೆಂದು ಕರೆಯಲ್ಪಡುತ್ತಾರೆ. ಆದರೆ ಮಲಯಾಳಿ ಬಿಲ್ಲವರು ಮೂಲತಃ ತೀಯಾಗೆ ಸೇರಿದ್ದು, ಮೂಲ ಕೇರಳ. 2ಎ ವಿಭಾಗದಲ್ಲಿ ಬರುವ ತೀಯಾ ಸಮುದಾಯದವರು ಕರ್ನಾಟಕದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ತೀಯಾ ಸಮಾಜ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್, ಉಳ್ಳಾಲ ವಲಯದ ಅಧ್ಯಕ್ಷ ಜಯಂತ್ ಕೊಂಡಾಣ, ಉಳ್ಳಾಲ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ಟನಗರ್, ಉಳ್ಳಾಲ ಕ್ಷೇತ್ರದ ಅಧ್ಯಕ್ಷ ದಾನಂದ ಗುರಿಕಾರ, ಪ್ರಮುಖರಾದ ದಿನೇಶ್ ಕುಂಪಲ, ಉಮೇಶ್ ಬೆಂಜನಪದವು, ಮಂಗಳೂರು ವಲಯ ಅಧ್ಯಕ್ಷ ರಾಕೇಶ್ ಕುಮಾರ್, ರೋಹಿತಾಶ್ವ ಕುಡುಪು, ಮಾಜಿ ಅಧ್ಯಕ್ಷರಾ ಉಮೇಶ್ ಕುಮಾರ್, ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಜ್ ಗೋಪಾಲ್ ಸೇರಿ ಹಲವರು ಉಪಸ್ಥಿತರಿದ್ದರು.