ಉಡುಪಿ: ರಂಗಭೂಮಿ ಸದಸ್ಯರಾಗಿ, ತುಳು ಕೂಟ, ಯಕ್ಷಗಾನ ಕಲಾರಂಗ ಸೇರಿ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡಿದ್ದ ಗೋಪಾಲಣ್ಣ ಎಂದೇ ಹೆಸರಾಗಿದ್ದ ಗೋಪಾಲ್ ಅವರು ಇಂದು (ಸೆ.18) ವಯೋಸಹಜ ಅಸೌಖ್ಯದಿಂದ ನಿಧನರಾಗಿದ್ದಾರೆ.
ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಯಾಗಿದ್ದ ಇವರು, 1990ರ ದಶಕದಲ್ಲಿ ರಂಗಭೂಮಿ ಸಂಸ್ಥೆಯ ಸದಸ್ಯರಾಗಿ 1995 ರಿಂದ 2010ರ ತನಕ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಬಳಿಕ ಆಡಳಿತ ಮಂಡಳಿಯ ಗೌರವ ಸಲಹಾ ಸಮಿತಿ ಸದಸ್ಯರಾಗಿ ನಿರಂತರವಾಗಿ ರಂಗಭೂಮಿಯನ್ನು ಬೆಳೆಸುವಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ತುಳುಕೂಟ, ಯಕ್ಷಗಾನ ಕಲಾರಂಗ ಹಾಗೂ ಇನ್ನಿತರ ಸಾಂಸ್ಕೃತಿಕ ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಗೋಪಾಲ್ ಅವರು ಮಾಜಿ ಕೇಂದ್ರ ಸಚಿವ ದಿ.ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಬಳಗದಲ್ಲಿದ್ದರು. ರಂಗಭೂಮಿಯ ಕಾರ್ಯಕ್ರಮಗಳಿದ್ದಾಗ ಸಭಾಂಗಣದ ತಯಾರಿ ಹಾಗೂ ವೇದಿಕೆ ತಯಾರಿಯಲ್ಲಿ ಇವರ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ಮೃತರ ಅಂತಿಮ ವಿಧಿ ವಿಧಾನಗಳು ಇಂದು ಮಧ್ಯಾಹ್ನ 12:30ಕ್ಕೆ ಬ್ರಹ್ಮಗಿರಿಯ ಬಾಲ ಭವನದ ಬಳಿಯಲ್ಲಿರುವ ರಾಮಣ್ಣ ಶೆಟ್ಟಿ ಕಾಂಪೌಂಡ್ ನಲ್ಲಿರುವ ನಿವಾಸದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.