ಮಂಗಳೂರು: ಹೊಂಡಕ್ಕೆ ಬಿದ್ದ ಶ್ವಾನವೊಂದು ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನ ಬೆಂದೂರು ಬಳಿ ನಡೆದಿದೆ. ಗೇಲ್ ಗ್ಯಾಸ್ ಕಂಪೆನಿಯವರು ಅಗೆದ ಹೊಂಡವನ್ನು ಮುಚ್ಚದೇ ಬಿಟ್ಟ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಾಯಿ ಅಳುತ್ತಿರುವುದನ್ನು ಕೇಳಿದ ತಕ್ಷಣವೇ ಪ್ರಾಣಿಪ್ರೇಮಿಗಳು ಹಾಗೂ ಸ್ಥಳೀಯರು ಅನಿಮಲ್ ಕೇರ್ ಟ್ರಸ್ಟ್‌ಗೆ ಮಾಹಿತಿ ನೀಡಿದ್ದು, ಅವರ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಶ್ವಾನವನ್ನು ಸುರಕ್ಷಿತವಾಗಿ ಹೊರತೆಗೆದರು. ಅಲ್ಪ ಗಾಯಗಳಿಂದ ಬಳಲುತ್ತಿದ್ದ ಶ್ವಾನಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಟ್ರಸ್ಟ್‌ನ ಆಶ್ರಯದಲ್ಲಿ ಆರೈಕೆಗೆ ಒಯ್ಯಲಾಯಿತು.
ಸ್ಥಳೀಯ ನಿವಾಸಿಗಳು ಗೇಲ್ ಗ್ಯಾಸ್ ಕಂಪೆನಿಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಹೊಂಡಗಳನ್ನು ಅಗೆದು ಬಿಟ್ಟಿರುವುದು ಗಂಭೀರ ನಿರ್ಲಕ್ಷ್ಯ. ಇದರಿಂದ ಮಕ್ಕಳಿಗೂ, ವಯೋವೃದ್ಧರಿಗೂ, ವಾಹನ ಸವಾರರಿಗೂ ಅಪಾಯ ಉಂಟಾಗಬಹುದು. ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು ಮಾತನಾಡಿ, “ಇತ್ತೀಚೆಗೆ ಇಂತಹ ಅನೇಕ ಪ್ರಕರಣಗಳು ಮಂಗಳೂರಿನ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿವೆ. ನಿರ್ಲಕ್ಷ್ಯದಿಂದ ಪ್ರಾಣಿಗಳೂ, ಮನುಷ್ಯರೂ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಹೇಳಿದರು.