ಪಾಲಿಕೆ ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ – ಅಧಿಕಾರಿಗಳ ವಿರುದ್ಧ ಶಾಸಕ ಭರತ್ ಶೆಟ್ಟಿ ಗರಂ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಶಾಸಕ ಡಾ. ಭರತ್ ಶೆಟ್ಟಿ ವೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸುರತ್ಕಲ್‌ನ ಶಾಸಕರ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಅಧಿಕಾರಿಗಳು ಸಮನ್ವಯತೆಯ ಕೊರತೆಯಿಂದ ಕಾಮಗಾರಿಗಳ ವೇಗ ಕುಂಠಿತಗೊಂಡಿದೆ ಎಂದು ಗರಂ ಆದ ಶಾಸಕರು, “ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಅಡೆತಡೆ ಎದುರಾದರೂ ನನ್ನೊಂದಿಗೆ ಹಂಚಿಕೊಳ್ಳಬೇಕು, ಆಗ ಮಾತ್ರ ಮೇಲಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯ” ಎಂದು ಸೂಚಿಸಿದರು.

ರಸ್ತೆ ಹಾಗೂ ಸೇತುವೆ ಕಾಮಗಾರಿಗಳು
ಕುಳಾಯಿ ರೈಲ್ವೆ ಮೇಲ್ ಸೇತುವೆಯ ಕಾಂಕ್ರೀಟ್ ಕಾಮಗಾರಿಗಾಗಿ ಸಂಚಾರ ವ್ಯತ್ಯಯ ಅಗತ್ಯವಿರುವ ಹಿನ್ನೆಲೆಯಲ್ಲಿ, ತಕ್ಷಣವೇ ವಾಹನ ಸಂಚಾರದಲ್ಲಿ ಬದಲಾವಣೆ ನೋಟಿಸ್ ನೀಡುವಂತೆ ಪಣಂಬೂರು ಎಸಿಪಿಗೆ ಶಾಸಕರು ನಿರ್ದೇಶನ ನೀಡಿದರು. ಮರಕಡ ವಿಮಾನ ನಿಲ್ದಾಣ ಸಂಪರ್ಕ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ತುರ್ತು ಅನುದಾನ ಮೀಸಲಿಡಲು ಆಯುಕ್ತರಿಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು. “ಪ್ಯಾಚ್ ವರ್ಕ್ ಕೆಲಸ ಕೂಡ ತಕ್ಷಣ ಕೈಗೊಳ್ಳಬೇಕು, ಇಲ್ಲವಾದರೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಮಾರ್ಕೆಟ್ ಹಾಗೂ ಒಳಚರಂಡಿ ಸಮಸ್ಯೆ
ಸುರತ್ಕಲ್ ಮಾರುಕಟ್ಟೆ ಕಾಮಗಾರಿಯನ್ನು ಶೀಘ್ರ ಮುಗಿಸಲು ವ್ಯಾಪಾರಿಗಳ ಸ್ಥಳಾಂತರ ಮತ್ತು ಭೂಸ್ವಾಧೀನ ಸಮಸ್ಯೆ ಬಗೆಹರಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಒಳಚರಂಡಿ ಕಾಮಗಾರಿಯಲ್ಲಿ ನಿರಂತರ ಸಮಸ್ಯೆ ಮುಂದುವರಿಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ವೆಟ್‌ವೆಲ್ ಪ್ರದೇಶಗಳಲ್ಲಿ ಜನರೇಟರ್ ಅಳವಡಿಸಿ ನಿರಂತರ ವಿದ್ಯುತ್ ಪೂರೈಕೆ ಖಾತ್ರಿಪಡಿಸಬೇಕು ಎಂದು ತಿಳಿಸಿದರು.

ಎರಡನೇ ಸುತ್ತಿನ ಚರ್ಚೆ
ಮುಂಚೂರು ಪ್ರದೇಶದಿಂದ ಎಸ್ಟಿಪಿ ನೀರನ್ನು ಎಂಆರ್‌ಪಿಎಲ್‌ಗೆ ಪೈಪ್‌ಲೈನ್ ಮೂಲಕ ಒದಗಿಸುವ ಕುರಿತು ನಡೆಯುತ್ತಿರುವ ಮಾತುಕತೆ ಬಗ್ಗೆ ಶಾಸಕರು ಪ್ರಥಮ ಹಂತ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಎರಡನೇ ಸುತ್ತಿನ ಚರ್ಚೆ ನಡೆಯಲಿದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತ ನರೇಶ್ ಶೆಣೈ, ಸುರತ್ಕಲ್ ವಿಭಾಗೀಯ ಆಯುಕ್ತೆ ವಾಣಿ ಆಳ್ವ, ಮಾಜಿ ಸದಸ್ಯರು ವರುಣ್ ಚೌಟ, ಸರಿತಾ ಶಶಿಧರ್, ಶ್ವೇತಾ ಪೂಜಾರಿ ಹಾಗೂ ಇಂಜಿನಿಯರ್‌ಗಳು ಹಾಜರಿದ್ದರು.

error: Content is protected !!