ಬಾರ್ಮರ್ (ರಾಜಸ್ಥಾನ): 37 ವರ್ಷದ ಮಹಿಳೆಯೊಬ್ಬರು ತನ್ನ ಪ್ರಿಯಕರನನ್ನು ಮದುವೆಯಾಗಬೇಕೆಂಬ ಹಂಬಲದಿಂದ 600 ಕಿ.ಮೀ. ದೂರ ಕಾರು ಚಲಾಯಿಸಿ ಬಂದಿದ್ದರೂ, ಕೊನೆಯಲ್ಲಿ ಅವನೇ ಆಕೆಯ ಪ್ರಾಣ ಕಸಿದ ಘಟನೆ ಬಾರ್ಮರ್ ಜಿಲ್ಲೆಯಲ್ಲಿ ಸಂಭವಿಸಿದೆ.

ಜುನ್ಜುನುವಿನ ಅಂಗನವಾಡಿ ಮೇಲ್ವಿಚಾರಕಿ ಮುಖೇಶ್ ಕುಮಾರಿ, ದಶಕದ ಹಿಂದೆ ಪತಿಯಿಂದ ಬೇರ್ಪಟ್ಟಿದ್ದರು. ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಬಾರ್ಮರ್‌ನ ಶಾಲಾ ಶಿಕ್ಷಕ ಮನರಾಮ್ ಅವರೊಂದಿಗೆ ಪರಿಚಯ ಬೆಳೆಸಿಕೊಂಡು, ನಂತರ ಪ್ರೀತಿಯಲ್ಲಿ ಮುಳುಗಿದ್ದರು. ಆಗಾಗ್ಗೆ ಜುನ್ಜುನುವಿನಿಂದ ಬಾರ್ಮರ್‌ಗೆ ಕಾರು ಚಲಾಯಿಸಿ ಪ್ರಿಯಕರನನ್ನು ಭೇಟಿಯಾಗುತ್ತಿದ್ದರು.
ಆದರೆ ಮದುವೆ ವಿಚಾರದಲ್ಲಿ ಇಬ್ಬರ ಮಧ್ಯೆ ಬಿರುಕು ಮೂಡಿತ್ತು. ಮುಖೇಶ್ ವಿಚ್ಛೇದನ ಪಡೆದಿದ್ದರೆ, ಮನರಾಮ್ ಅವರ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇತ್ತು. ಈ ಹಿನ್ನೆಲೆ ಜಗಳಗಳು ನಡೆಯುತ್ತಿದ್ದವು.
ಸೆಪ್ಟೆಂಬರ್ 10ರಂದು ಮುಖೇಶ್ ಕಾರಿನಲ್ಲಿ ಬಂದು ಮನರಾಮ್ ಅವರ ಮನೆ ತಲುಪಿದಳು. ಅಲ್ಲಿಯೇ ಕುಟುಂಬದವರಿಗೆ ತಮ್ಮ ಸಂಬಂಧದ ಬಗ್ಗೆ ಹೇಳಿದಾಗ, ವಾಗ್ವಾದ ಉಂಟಾಯಿತು. ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ನಂತರ ಸಂಜೆ ವೇಳೆ ಇಬ್ಬರು ಒಟ್ಟಿಗೆ ಇದ್ದಾಗ ಮನರಾಮ್ ಕಬ್ಬಿಣದ ರಾಡ್‌ನಿಂದ ಮುಖೇಶ್ ಅವರ ತಲೆಗೆ ಹೊಡೆದು ಕೊಲೆ ಮಾಡಿದನು.
ಹತ್ಯೆಯ ನಂತರ ಶವವನ್ನು ಆಕೆಯ ಕಾರಿನ ಚಾಲಕನ ಆಸನದಲ್ಲಿರಿಸಿ, ಅಪಘಾತವೆಂದು ತೋರಿಸಲು ರಸ್ತೆ ಬದಿಗೆ ಕಾರನ್ನು ಉರುಳಿಸಿದನು. ಮರುದಿನ ಬೆಳಿಗ್ಗೆ ವಕೀಲರ ಸಲಹೆಯಂತೆ ಪೊಲೀಸರಿಗೆ ಶವದ ಮಾಹಿತಿ ನೀಡಿದ ಮನರಾಮ್ ವಿಚಾರಣೆ ವೇಳೆ ಸತ್ಯ ಬಿಚ್ಚಿಟ್ಟಿದ್ದಾನೆ.
ಪ್ರಸ್ತುತ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮುಖೇಶ್ ಅವರ ಕುಟುಂಬಸ್ಥರು ಬಾರ್ಮರ್ ತಲುಪುವ ನಿರೀಕ್ಷೆಯಿದೆ.
ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸಿಂಗ್, “ಮಹಿಳೆಯನ್ನು ಕೊಂದು ಶವವನ್ನು ಕಾರಿನಲ್ಲಿ ಇಟ್ಟಿರುವುದನ್ನು ದೃಢಪಡಿಸಲಾಗಿದೆ. ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳವನ್ನು ಬಳಸಿ ಪ್ರಕರಣವನ್ನು ಎಲ್ಲಾ ದಿಕ್ಕಿನಿಂದ ತನಿಖೆ ಮಾಡಲಾಗುತ್ತಿದೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.” ಎಂದು ತಿಳಿಸಿದ್ದಾರೆ: