ಧರ್ಮಜಾಗೃತಿ ಸಮಾವೇಶ: ಜಾತಿ-ಮತ, ಪಕ್ಷ ಬೇಧ ಮರೆತು ಧರ್ಮಸ್ಥಳ ರಕ್ಷಣೆಗೆ ಒಗ್ಗಟ್ಟಾದ ಸಹಕಾರಿ ಬಂಧುಗಳು

ಧರ್ಮಸ್ಥಳ:  ಕ್ಷೇತ್ರದ ಬಗ್ಗೆ ಹರಡುತ್ತಿರುವ ಅಪಪ್ರಚಾರ ಮತ್ತು ಸುಳ್ಳು ವದಂತಿಗಳನ್ನು ಖಂಡಿಸಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬೆಂಬಲಕ್ಕೆ ಹಾಗೂ ಧರ್ಮಸ್ಥಳದ ಪಾವಿತ್ರ್ಯೆಯ ರಕ್ಷಣೆಗೆ ಸದಾ ಸಿದ್ಧರೂ, ಬದ್ಧರೂ ಆಗಿದ್ದು, ಧರ್ಮಸ್ಥಳದ ಜೊತೆ ಸದಾ ಇರುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಭರವಸೆ ನೀಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರಿಗಳು ಭಾನುವಾರ(ಸೆ.14) ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಧರ್ಮಜಾಗೃತಿ ಸಮಾವೇಶದಲ್ಲಿ ಸುಮಾರು ಹತ್ತು ಸಾವಿರ ಜನ ಹಾಗೂ 3,000ಕ್ಕೂ ಹೆಚ್ಚು ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಿದರು. ಹೆಗ್ಗಡೆಯವರ ಜೊತೆಗಿದ್ದು, ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಧರ್ಮಸ್ಥಳ ಕ್ಷೇತ್ರದ ರಕ್ಷಣೆ ಎಲ್ಲಾ ಭಕ್ತರು ಹಾಗೂ ಅಭಿಮಾನಿಗಳ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದ್ದು, ಇಂತಹ ಪವಿತ್ರ ಸೇವೆಯಿಂದ ಭಕ್ತರ ಮನಸ್ಸಿಗೂ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು “ಸತ್ಯದ ಜೊತೆಗೆ ನಾವಿದ್ದೇವೆ” ಎಂದು ಘೋಷಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ನಾಯಕರು ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿದ್ದೇವೆ ಎಂದು ಪ್ರತಿಜ್ಞೆ ಮಾಡಿದರು.

ಮಾಧ್ಯಮಗಳಲ್ಲಿ ಅಪಪ್ರಚಾರ ಹಾಗೂ ಸುಳ್ಳು ವದಂತಿ ಪ್ರಸಾರದಿಂದ ತಮಗೆ ಆಘಾತಕರವಾದ ನೋವು ಉಂಟಾಗಿದೆ. ಆದರೆ ಧಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಭಗವಾನ್ ಚಂದ್ರನಾಥ ಸ್ವಾಮಿ ಇಬ್ಬರೂ ಶಾಂತ ಸ್ವಭಾವದವರಾಗಿದ್ದು, ದೇವರ ಅನುಗ್ರಹ, ಧರ್ಮದೇವತೆಗಳು ಮತ್ತು ಅಣ್ಣಪ್ಪ ಸ್ವಾಮಿಯ ಅಭಯದಿಂದ ನೋವು ಮರೆಯಲು ಸಾಧ್ಯವಾಗಿದೆ. ಅಪವಾದ, ಅಪಪ್ರಚಾರ ಮಾಡಿದವರಿಗೂ ಅಭಿನಂದನೆ ಹೇಳಿದ ಹೆಗ್ಗಡೆಯವರು ಅವರಿಂದಾಗಿ ಪ್ರತಿದಿನ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಬಂದು ತಮ್ಮ ಪ್ರೀತಿ-ವಿಶ್ವಾಸ, ಗೌರವ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಧನ್ಯವಾದವಿತ್ತರು.

error: Content is protected !!