ಮಂಗಳೂರು: ಇತರರಿಗೆ ಸಮಸ್ಯೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಶಬ್ದಕ್ಕೆ ಮಿತಿ ನಿಗದಿಪಡಿಸಲಾಗಿದ್ದು, ಅದನ್ನು ಪಾಲಿಸಿಕೊಂಡು ಕಾರ್ಯಕ್ರಮ ಆಯೋಜಿಸಬೇಕು ಯಾವುದೇ ಹಬ್ಬಗಳ ಸಾರ್ವಜನಿಕ ಆಚರಣೆ, ಉತ್ಸವ, ಮೆರವಣಿಗೆಗಳಿಗೆ ಪೊಲೀಸ್ ಇಲಾಖೆ ಅಡ್ಡಿಪಡಿಸಿಲ್ಲ. ಸಮಯದ ಮಿತಿಯನ್ನೂ ನಿಗದಿ ಪಡಿಸಿಲ್ಲ. ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ಕಮೀಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಮಿಷನರ್ ಕಚೇರಿಯ ಸಮೀಪದ ನೆಹರೂ ಮೈದಾನದಲ್ಲಿಯೇ ಗಣೇಶೋತ್ಸವ ಮೆರವಣಿಗೆ ತಡರಾತ್ರಿಯವರೆಗೆ ನಡೆದಿದೆ. ಟ್ಯಾಬ್ಲೋಗಳಲ್ಲಿ ನಾವು ಸೂಚಿಸಿದಷ್ಟೇ ಸೌಂಡ್ ಬಳಕೆ ಮಾಡಿದ್ದಾರೆ. ಮುಂಜಾನೆ 2.30ರ ವರೆಗೆ ಮೆರವಣಿಗೆ ನಡೆದಿದ್ದು, ಯಾರಿಗೂ ಸಮಸ್ಯೆಯೂ ಆಗಿಲ್ಲ. ಇತರೆಡೆಯೂ ಪೊಲೀಸರು ಸಮಸ್ಯೆ ಕೊಟ್ಟಿಲ್ಲ. ಆದರೆ ಮೈಕ್‌ಗಳ ಸೌಂಡ್‌ಗೆ ಮಾತ್ರ ಮಿತಿ ಹಾಕಲಾಗಿತ್ತು. ನಾಟಕ, ಯಕ್ಷಗಾನಗಳಿಗೂ ಇದೇ ಮಾರ್ಗಸೂಚಿಯಿದ್ದು, ಎಲ್ಲಿ, ಎಷ್ಟು ಬೇಕಾದರೂ ಸೌಂಡ್ ಇಡುವ ಅವಕಾಶ ಇಲ್ಲ. ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳ ವ್ಯಾಪ್ತಿ ಅವಲೋಕಿಸಿ ಎಷ್ಟು ಜನ ಸೇರುತ್ತಾರೆ ಎನ್ನುವುದನ್ನು ಆಧರಿಸಿ ಅದನ್ನು ಅನುಗುಣವಾಗಿ ಮೈಕ್ ಬಳಕೆ ಮಾಡಬೇಕು. ಸಮೀಪದ ಪೊಲೀಸ್ ಠಾಣೆಗಳಲ್ಲಿ ಅನುಮತಿ ಪಡೆಯಬೇಕು. ಕಾನೂನು ಪಾಲಿಸುವ ಸಲುವಾಗಿ ಈ ನಿಯಮ ತರಲಾಗಿದೆ ಎಂದರು.
ಕರ್ಕಶ ಶಬ್ದಗಳ ಬಗ್ಗೆ ಆಸ್ಪತ್ರೆ, ರೋಗಿಗಳು, ಶಾಲಾ ಕಾಲೇಜುಗಳಿಂದ ದೂರುಗಳು ಬರುತ್ತಿದೆ. 100 ಜನ ಸೇರುವಲ್ಲಿ 2000 ಜನರಿಗೆ ಕೇಳಿಸುವಷ್ಟು ಧ್ವನಿವರ್ಧಕ ಅಳವಡಿಸಿ ಇತರರಿಗೆ ತೊಂದರೆ ಮಾಡಲು ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸ್ಥಳೀಯ ಠಾಣೆಗಳಲ್ಲಿ ಅನುಮತಿ ಪಡೆಯುವಾಗಲೇ ಠಾಣಾ ನಿರೀಕ್ಷಕರು ಈ ಬಗ್ಗೆ ಪರಿಶೀಲಿಸಿ ಎಷ್ಟು ಡೆಸಿಬಲ್ ಬಳಕೆ ಮಾಡಬಹುದು ಎಂದು ಸೂಚಿಸುತ್ತಾರೆ, ಹಾಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
ಲಕ್ಕಿ ಸ್ಕೀಂಗಳಲ್ಲಿ ಅವ್ಯಹಾರ ನಡೆದಿರುವ ಬಗ್ಗೆ ಈಗಾಗಲೇ ದೂರು ಬಂದಿರುವ ಹಿನ್ನೆಲೆಯಲ್ಲಿ ಕೆಲವೊಂದು ಸಂಸ್ಥೆಗಳ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಕೆಲವು ಸ್ಕೀಂಗಳು 10-15 ವರ್ಷಗಳಿಂದ ನಡೆಯುತ್ತಿದ್ದು, ಸದ್ಯ ಅವುಗಳ ಬಗ್ಗೆ ದೂರು ಯಾವುದೇ ದೂರು ಬಾರದಿರುವುದರಿಂದ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದರು.