ತಿರುವನಂತಪುರಂ: ಕೇರಳದಲ್ಲಿ ಈ ವರ್ಷ ಒಟ್ಟು 66 ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್(ಮೆದುಳು ತಿನ್ನುವ ಅಮೀಬ) ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ. ಕೇವಲ ಸೆಪ್ಟೆಂಬರ್ ತಿಂಗಳಲ್ಲೇ ಏಳು ಸಾವುಗಳು ಸಂಭವಿಸಿರುವುದಾಗಿ ತಿಳಿದುಬಂದಿದೆ.
ಅಪರೂಪವಾಗಿ ಕಂಡುಬರುವ ಈ ಮಾರಕ ಸೋಂಕು ಸಾಮಾನ್ಯವಾಗಿ ಸರೋವರಗಳು, ನದಿಗಳು ಹಾಗೂ ತೊರೆಗಳಂತಹ ಸಿಹಿನೀರಿನ ಮೂಲಗಳಿಂದ ಹರಡುತ್ತದೆ. ಮುಕ್ತವಾಗಿ ಬದುಕುವ ಅಮೀಬಾದಿಂದ ಈ ಸೋಂಕು ಉಂಟಾಗುತ್ತದೆ.
ಶುಕ್ರವಾರ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, “ಕೇರಳವು ಈ ರೋಗದ ಪ್ರಕರಣಗಳನ್ನು ಬೇಗನೆ ಪತ್ತೆಹಚ್ಚುತ್ತಿರುವುದರಿಂದ, ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಾಗಿದೆ. ಮರಣ ಪ್ರಮಾಣ ಹೆಚ್ಚು ಇರುವ ಈ ಕಾಯಿಲೆಗೆ ವಿಶೇಷ ಪರೀಕ್ಷೆ ಹಾಗೂ ಚಿಕಿತ್ಸಾ ಪ್ರೋಟೋಕಾಲ್ ಸಿದ್ಧಪಡಿಸಿರುವುದರಿಂದ ಹಲವರನ್ನು ಉಳಿಸಲು ಸಾಧ್ಯವಾಗಿದೆ,” ಎಂದು ಹೇಳಿದರು.
ಆದರೆ, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದರು. “ರಾಜ್ಯದ ವಿವಿಧ ಭಾಗಗಳಲ್ಲಿ ಸೋಂಕು ಹರಡುವ ಕಾರಣವನ್ನು ಅಧ್ಯಯನ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಈಗಾಗಲೇ 16 ಮಂದಿ ಸಾವಿಗೀಡಾದರೂ ಜನರಿಗೆ ಸಮರ್ಪಕ ಎಚ್ಚರಿಕೆ ನೀಡಲಾಗಿಲ್ಲ. ‘ಇಲಾಖೆಯೇ ವೆಂಟಿಲೇಟರ್‌ನಲ್ಲಿದೆ’” ಎಂದು ಅವರು ಕೊಚ್ಚಿಯಲ್ಲಿ ಸುದ್ದಿಗಾರರಿಗೆ ಹೇಳಿದರು.
ಈ ನಡುವೆ, ಮಲಪ್ಪುರಂ ಜಿಲ್ಲೆಯ ಅರೀಕೋಡ್‌ನ 10 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದು, ಆಕೆಯನ್ನು ಪ್ರಸ್ತುತ ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆಕೆ ಎರಡು ವಾರಗಳ ಹಿಂದೆ ಈಜುಕೊಳದಲ್ಲಿ ಸ್ನಾನ ಮಾಡಿದ ನಂತರ ಅಸ್ವಸ್ಥಳಾಗಿದ್ದಾಳೆ.
ಪ್ರಸ್ತುತ, 11 ಮಂದಿ ರೋಗಿಗಳು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ, ರಾಮನಾಟ್ಟುಕ್ಕರ ಮೂಲದ ಒಬ್ಬ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ.
ಕಲುಷಿತ ನೀರಿನಲ್ಲಿ ಈಜುವುದು ಮತ್ತು ಸ್ನಾನ ಮಾಡುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.