ಪೊಲೀಸರ ವಿರುದ್ಧ ಸುಳ್ಳು ಸುದ್ದಿ ಪ್ರಚಾರ: ಪ್ರಕರಣ ದಾಖಲು

ಬಂಟ್ವಾಳ: ಸಜೀಪದ ದೇರಾಜೆಯಲ್ಲಿ ತನ್ನ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಸುಳ್ಳು ದೂರು ನೀಡಿದ ಆರೋಪಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವ ವಿಚಾರದ ಸತ್ಯಾಸತ್ಯತೆಯನ್ನು ತಿಳಿಯದೆ ಪೊಲೀಸ್‌ ಇಲಾಖೆಯ ಕುರಿತು ಸುಳ್ಳು ಸುದ್ದಿ ಹಬ್ಬಿದ ವ್ಯಕ್ತಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಿಯಾಜ್‌ ಕಡಂಬು ಎಂಬಾತ ಸುಳ್ಳು ಸುದ್ದಿ ಹಬ್ಬಿದ ಆರೋಪಿ.

ರಿಯಾಜ್‌ ಆ. 30ರಂದು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಸುಳ್ಳು ಸುದ್ದಿ ಹಬ್ಬಿದ್ದಾನೆ ಎಂಬುದು ಪೊಲೀಸರ ಆರೋಪ. ತನ್ನ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಸುಳ್ಳು ದೂರು ನೀಡಿದ ಸಜೀಪಮುನ್ನೂರು ಗ್ರಾಮದ ನಂದಾವರ ನಿವಾಸಿ ಉಮ್ಮರ್‌ ಫಾರೂಕ್‌ನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಅಶ್ರಫ್‌ ತಲಪಾಡಿ ಎಂಬಾತ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಸುಳ್ಳು ಸುದ್ದಿ ಹರಡಿದ್ದು ಆತನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯದೆ ರಿಯಾಜ್‌ ಫೇಸ್‌ಬುಕ್‌ನಲ್ಲಿ ಎರಡು ಘಟನೆಗಳನ್ನು ಹೋಲಿಕೆ ಮಾಡಿಕೊಂಡು ಧರ್ಮದ ಆಧಾರದಲ್ಲಿ ಸಂಬಂಧವನ್ನು ಕಲ್ಪಿಸಿ ಪೊಲೀಸ್‌ ಇಲಾಖೆಯ ಕುರಿತು ಸುಳ್ಳು ಸುದ್ದಿ ಹಬ್ಬಿದ್ದಾನೆ. ಅಪರಾಧ ಎಸಗುವಂತೆ ಜನರನ್ನು ಪ್ರೇರೇಪಿಸಿ ಜಾತಿ, ಧರ್ಮದ ಆಧಾರದ ಮೇಲೆ ವೈರತ್ವ, ದ್ವೇಷ ಅಥವಾ ವೈಮನಸ್ಸು ಬರುವಂತೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!